ಇಸ್ಕಾನ್ ಮತ್ತೆ ಸುದ್ದಿಯಲ್ಲಿದೆ. ಇಸ್ಕಾನ್‌ಗೂ ವಿವಾದಗಳಿಗೂ ಅದೇನೋ ಬಿಡಲಾರದ ನಂಟು. ಇಹಕ್ಕಿಂತ ’ಪರ’ಲೋಕಕ್ಕೆ ಹೆಚ್ಚಿನ ಒತ್ತು ನೀಡುತ್ತದೆ ಇಸ್ಕಾನ್. ಇಂತಹ ಈ ಇಸ್ಕಾನ್‌ಗೆ ಈಗ ’ಇಹ’ದ್ದೇ ದೊಡ್ಡ ತಲೆನೋವು. ಪದೇ ಪದೇ ವಿವಾದಗಳಿಗೆ ಬಲಿಯಾಗುವುದು ಇಸ್ಕಾನ್‌ಗೆ ರೂಢಿಯಾದಂತಿದೆ. ಅಕ್ಷಯ ಪಾತ್ರೆಯನ್ನು ಇಸ್ಕಾನ್ ಭಿಕ್ಷಾ ಪಾತ್ರೆ ಮಾಡಿಕೊಂಡಿದೆ. ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿದೆ ಎಂಬುದು ಅದರ ವಿರುದ್ಧ ಪದೆ ಪದೆ ಕೇಳಿಬಂದಿರುವ ಆರೋಪ. ಈ ವಿಷಯ ಎತ್ತಿಕೊಂಡು ಹರಿಹಾಯುತ್ತಿರುವ ಕಾಂಗ್ರೆಸ್ ಧುರೀಣ ಡಿ.ಕೆ. ಶಿವಕುಮಾರ್ ವಿರುದ್ಧ ಇಸ್ಕಾನ್ ಕೆರಳಿದೆ. ಹಾಗಾದ್ರೆ, ತಪ್ಪು ಯಾರದು? ಇಡೀ ಪ್ರಕರಣದ ಹಕೀಕತ್ತು ಏನು?
ಇಸ್ಕಾನ್‌ನ ಹಿಸ್ಟರಿಯೇ ಒಂದು ದೊಡ್ಡ ಮಿಸ್ಟರಿ. ಇಹಲೋಕಕ್ಕಿಂತ ಪರಲೋಕಕ್ಕೆ ಒತ್ತು ಕೊಡ್ತದೆ ಇಸ್ಕಾನ್ ಚಿಂತನೆ. ಹೀಗಿದ್ರೂ ಆಗಿಂದಾಗ್ಗೆ ವಿವಾದದ ಸುಳಿಯಲ್ಲಿ ಸಿಲುಕುತ್ತದೆ ! ಮೋಕ್ಷದ ಮಾತಾಡುವ ಸಂಸ್ಥೆಯೊಂದು ಪದೆ ಪದೆ ವಿವಾದಗಳಿಗೆ ಸಿಲುಕ್ತಿದೆ ಅಂದ್ರೆ ಅದೇನೂ ಸಣ್ಣ ವಿಷಯವಲ್ಲ. ಏಕೆಂದ್ರೆ, ಧಾರ್ಮಿಕ ಸಂಸ್ಥೆಯಾದ ಇಸ್ಕಾನ್ ಅದ್ಯಾವುದೋ ಕಾಂಜಿಪಿಂಜಿ ಸಂಸ್ಥೆಯೇನಲ್ಲ. ಇಡೀ ಜಗತ್ತಿನಾದ್ಯಂತ ಹರಡಿಕೊಂಡಿರುವ ಮಲ್ಟಿ ನ್ಯಾಶನಲ್ ಧಾರ್ಮಿಕ ಸಂಸ್ಥೆ ಅದು.
ಯಸ್. ಇಸ್ಕಾನ್ ಅಂದ್ರೆ ಇಂಗ್ಲಿಷಿನಲ್ಲಿ ದಿ ಇಂಟರ್ ನ್ಯಾಷ್‌ನಲ್ ಸೊಸೈಟಿ ಪಾರ್ ಕೃಷ್ಣ ಕಾನ್ಸಿಯಸ್‌ನೆಸ್. ಅಂದ್ರೆ ಕೃಷ್ಣ ಪ್ರಜ್ಞೆಯ ಅಂತರ್‌ರಾಷ್ಟ್ರೀಯ ಸಂಸ್ಥೆ ಅನ್ನೋದು ಇದರ ಪೂರ್ಣ ನಾಮಧ್ಯೇಯ. ಇಂತಹ ಈ ಸಂಸ್ಥೆಯ ಸಂಸ್ಥಾಪಕ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ.
ಇಂತಹ ಇಸ್ಕಾನ್ ಸಂಸ್ಥೆ ಆರಂಭವಾಗಿದ್ದು ೧೯೬೬ರಲ್ಲಿ. ಈ ಸಂಸ್ಥೆ ಹುಟ್ಟಿದ್ದು ಭಾರತದಲ್ಲಲ್ಲ, ದೂರದ ನ್ಯೂಯಾರ್ಕ್‌ನಲ್ಲಿ. ವಿದೇಶಿ ನೆಲದಲ್ಲಿ ಹರೇಕೃಷ್ಣ ಚಳವಳಿ ಹರಡೋದು ಇದರ ಮುಖ್ಯ ಧ್ಯೇಯ..
ಇಸ್ಕಾನ್ ವೈಷ್ಣವ ಪಂಥದ ಸಂಸ್ಥೆ. ಭಗವದ್ಗೀತೆ, ಶ್ರೀಮದ್ ಭಾಗವತಂ ಮತ್ತಿತರ ಧಾರ್ಮಿಕ ಗ್ರಂಥಗಳು ಇಸ್ಕಾನ್‌ನ ಹರೇ ಕೃಷ್ಣ ಚಳವಳಿಯ ಮೂಲ ತಳಹದಿಯಂತೆ. ಯಾವುದೇ ಪಂಥಕ್ಕೆ ಸೇರದ ಇಸ್ಕಾನ್, ತನ್ನನ್ನು ತಾನು ಗುರುತಿಸಿಕೊಂಡಿರುವುದು ಭಕ್ತಿಪರಂಪರೆಯ ಮೂಲಕ. ಇದರ ಭಕ್ತರು ವಿಚಾರ ಮತ್ತು ಕ್ರಿಯೆಯ ಮೂಲಕ ಭಗವಾನ್ ಕೃಷ್ಣನನ್ನು ಆರಾಧಿಸ್ತಾರೆ. ಜಗತ್ತಿನಾದ್ಯಂತ ನಾನೂರಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿರುವ ಇಸ್ಕಾನ್ ೬೦ ಕೃಷಿಫಾರಂಗಳು, ೫೦ ಶಾಲೆಗಳು ಹಾಗೂ ೯೦ಕ್ಕೂ ಹೆಚ್ಚು ಸಸ್ಯಹಾರಿ ರೆಸ್ಟೋರೆಂಟ್‌ಗಳನ್ನು ಹೊಂದಿದೆ.
ಇಸ್ಕಾನ್ ಬಗ್ಗೆ ತಿಳ್ಕೊಂಡ್ರಲ್ವಾ. ಇಂತಹ ಇಸ್ಕಾನ್ ಇವತ್ತು ದೇಶ-ವಿದೇಶಗಳಲ್ಲಿ ದೊಡ್ಡದಾಗಿ ಬೆಳೆದು ನಿಂತಿದೆ. ಕೋಟ್ಯಂತರ ರೂಪಾಯಿಗಳ ವಹಿವಾಟು ಮತ್ತು ಆಸ್ತಿಪಾಸ್ತಿ ಇಸ್ಕಾನ್ ಹೆಸರಲ್ಲಿದೆ. ಜನರ ಧಾರ್ಮಿಕ ಭಾವನೆಯನ್ನೇ ಬಂಡವಾಳ ಮಾಡಿಕೊಂಡು, ಅದನ್ನೊಂದು ಕಾರ್ಪೋರೇಟ್ ಬ್ಯುಸಿನೆಸ್ ಸೆಂಟರ್‌ನ್ನಾಗಿ ಮಾರ್ಪಡಿಸಲಾಗಿದೆ ಎಂಬ ಮಾತೂ ಇಸ್ಕಾನ್ ಬಗ್ಗೆ ಇದೆ. ನೀವು ಯಾವುದೇ ಇಸ್ಕಾನ್ ಕೇಂದ್ರಕ್ಕೆ ಹೋದ್ರೂ, ಈ ಮಾತು ನಿಮಗೆ ಸ್ಪಷ್ಟವಾಗಿ ಅರ್ಥ ಆಗುತ್ತೆ.
ಇದೆಲ್ಲದರ ನಡುವೆ ಹೇಳ್ಲೆಬೇಕಾದ ಮಾತೊಂದಿದೆ. ಅದೇನೆಂದೆ,. ಆಗ್ಲೆ ಹೇಳಿದ್ವಲ್ಲಾ ಇಸ್ಕಾನ್ ಸಂಸ್ಥೆ ಸಂಸ್ಥಾಪಕ ಭಕ್ತಿವೇದಾಂತ ಸ್ವಾಮಿ ಪ್ರಭುಪಾದ. ಇವ್ರು ೧೯೭೦ರಲ್ಲಿ ಮರಣ ಹೊಂದ್ತಾರೆ. ಹೀಗೆ ಇವ್ರು ಮರಣ ಹೊಂದಿದ ಮೇಲೆ ಇವ್ರು ಸ್ಥಾಪಿಸಿದ ಇಸ್ಕಾನ್ ಸಂಸ್ಥೆಗೆ ವಾರಸುದಾರರು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತೆ. ಯಾಕಪ್ಪಾ ಇಷ್ಟೆಲ್ಲ ರಗಳೇ ಅಂದ್ರೆ, ಸಂಸ್ಥೆಗೆ ಹರಿದು ಬರುತ್ತಿದ್ದ ಹಣದ ಹೊಳೆ ಉತ್ರ ಹೇಳುತ್ತೆ. ಅದು ಸರಿನೇ ಬಿಡಿ. ದುಡ್ಡು ಇರೋ ಕಡೆ ವಿವಾದ ಸೃಷ್ಟಿಯಾಗ್ದೆ ಇರುತ್ತಾ? ಸತ್ತು ಹೋದ ಪ್ರಭುಪಾದರು, ಸಂಸ್ಥೆಗೆ ಯಾರನ್ನು ಟ್ರಸ್ಟಿಯಾಗಿ ನೇಮಿಸಿರುವುದಿಲ್ಲ. ಬದಲಿಗೆ ೨೫ ಮಂದಿಯ ಕಾರ‍್ಯಕಾರಿ ಸಮಿತಿ ಇರುತ್ತದೆ. ಆದರೆ, ಪ್ರಭುಪಾದರ ಮರಣಾನಂತರ, ಈ ಸಮಿತಿಯ ಒಳಗೂ ರಾಜಕೀಯ ಸೇರ್ಕೊಂಡ್ತು. ಇಸ್ಕಾನ್‌ನ ವಿವಿಧ ಶಾಖೆಗಳ ಆಡಳಿತದ ಬಗ್ಗೆ ಸಮಿತಿ ಸದಸ್ಯರಲ್ಲೆ ಭಿನ್ನಾಭಿಪ್ರಾಯಗಳು ಕಾಣಿಸ್ಕೊಂಡ್ವು. ಮುಂಬೈ ಇಸ್ಕಾನ್ ಮತ್ತು ಬೆಂಗಳೂರು ಇಸ್ಕಾನ್ ವಿವಾದ ರಾಜ್ಯ ಹೈಕೋರ್ಟ್ ಮೆಟ್ಟಲೇರಿದ್ದೇ ಇದಕ್ಕೆ ಸಾಕ್ಷಿ.
ಇಸ್ಕಾನ್‌ನಲ್ಲಿ ಇಂತಹ ವ್ಯಾಜ್ಯಗಳು ಒಂದೆರಡಲ್ಲ. ಈಗ ಬೆಂಗಳೂರಿನ ಇಸ್ಕಾನ್ ವಿಷಯಕ್ಕೆ ಬರೋಣ. ಈ ಸಂಸ್ಥೆ ಶುರುವಾಗಿದ್ದು ಪ್ರತ್ಯೇಕ ಸಂಸ್ಥೆಯಾಗಿ. ಅಂದ್ರೆ, ಇದಕ್ಕೂ, ಪ್ರಭುಪಾದರ ಇಸ್ಕಾನ್‌ಗಳು ನೇರ ಸಂಬಂಧ ಇಲ್ಲ. ‘ಪ್ರತಿಯೊಂದು ದೇವಸ್ಥಾನಗಳನ್ನು ಪ್ರತ್ಯೇಕವಾಗಿಯೇ ನೋಂದಾಯಿಸಬೇಕು. ಒಂದು ದೇವಸ್ಥಾನ ಇನ್ನೊಂದು ದೇವಸ್ಥಾನವನ್ನು ಅವಲಂಬಿಸಬಾರದು. ಈ ಎಲ್ಲಾ ದೇವಸ್ಥಾನಗಳು ಸ್ವತಂತ್ರವಾಗೇ ಕಾರ್ಯ ನಿರ್ವಹಿಸಬೇಕು ಹಾಗೂ ಆರ್ಥಿಕವಾಗಿಯೂ ಪ್ರಬಲವಾಗಬೇಕು’ ಎಂಬುದು ಇಸ್ಕಾನ್ ಸ್ಥಾಪಕ ಪ್ರಭುಪಾದರ ಆಶಯವಾಗಿತ್ತಂತೆ. ಹಾಗಾಗಿ ಎಲ್ಲಾ ಇಸ್ಕಾನ್‌ಗಳೂ ಸ್ವತಂತ್ರ ದೇವಾಲಯಗಳಾದ್ದರಿಂದ ನಿಜವಾದ ಇಸ್ಕಾನ್ ಯಾವುದು ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ್ಲವಂತೆ.. !
ಸರಿ ಹೊಯ್ತು ಬಿಡಿ. ಮುಂಬೈ ಇಸ್ಕಾನ್ ಒರಿಜಿನಲ್ಲೋ.. ನ್ಯೂಯಾರ್ಕ್ ಇಸ್ಕಾನ್ ಒರಿಜಿನಲ್ಲೋ ಅಥವಾ ಬೆಂಗಳೂರು ಇಸ್ಕಾನ್ ದೊಡ್ದೋ ಅಂತ ಕಟ್ಕೊಂಡು ನಮ್ಗೇನಾಗಬೇಕು ಹೇಳಿ ? ಈ ಇಸ್ಕಾನ್‌ಗಳು ಸ್ವತಂತ್ರವಾಗಿ ಕೆಲಸ ಮಾಡ್ತವೋ.. ಅಥವಾ ಒಟ್ಟೊಟ್ಟಿಗೇ ಕೆಲಸ ಮಾಡ್ಬೇಕೋ ಅನ್ನೋದು ಆಯಾ ಆಡಳಿತ ಮಂಡಳಿಗಳಿಗೆ ಸೇರಿದ ವಿಷಯ ಬಿಡಿ. ಮಜಾ ಅಂದ್ರೆ. ಈ ವಿಷಯ ರಾಜ್ಯ ಹೈಕೋರ್ಟ್ ಮೆಟ್ಟಲೇರಿತ್ತು. ಇಸ್ಕಾನ್‌ಗೆ ಸೇರಿದವರೆನ್ನಲಾದ ಕೆಲವರು, ವಿಚಾರಣೆ ನಡೆಸುತ್ತಿದ್ದ ಹೈಕೋರ್ಟ್ ನ್ಯಾಯಾಧೀಶರಿಗೆ ಅನಾಮಧೇಯ ಪತ್ರ ಬರೆದು ಬ್ಲ್ಯಾಕ್‌ಮೇಲ್‌ಗೆ ಯತ್ನಿಸಿದ ಆರೋಪವೂ ಕೇಳಿ ಬಂದಿತ್ತು. ಕೊನೆಗೆ, ಬೆಂಗಳೂರು ಇಸ್ಕಾನ್ ಕೇಸ್ ಗೆದ್ದಿತು. ಇದೆಲ್ಲ ಈಗ ಹಳೆಯ ವಿಚಾರ.
ಧರ್ಮ ಜಾಗೃತಿಗೇ ಅಂತ ಇಂಟರ್‌ನ್ಯಾಷ್‌ನಲ್ ಲೆವೆಲ್‌ನಲ್ಲಿ ಹುಟ್ಟಿದ ಸಂಸ್ಥೆ ಇಸ್ಕಾನ್. ಆದ್ರೆ, ಆ ಲೆವೆಲ್‌ನಿಂದ ಹಿಡಿದು ಲೋಕಲ್ ಲೆವಲ್‌ವರ‍್ಗೆ ಬರೀ ವಿವಾದಗಳಿಗೇ ಸಿಲುಕೊಂಡಿದ್ದು ಇದರ ಸ್ಪೆಷಾಲಿಟಿ. ಈಗ ನೀವು ನೋಡಿದ್ದು, ಕೇಳಿದ್ದು ಕೇವಲ ಸ್ಯಾಂಪಲ್ ಮಾತ್ರ. ಇಂತಹ ಹತ್ತು ಹಲವು ವಿವಾದಗಳು ಇಸ್ಕಾನ್ ಬೆನ್ನಿಗಂಟಿಕೊಂಡಿವೆ. ರಾಜ್ಯದ ಗಣ್ಯರೊಬ್ಬರ ಹೆಸರೂ ಇದ್ರಲ್ಲಿ ಕೇಳಿಬಂದಿದೆ.
ಆಗ್ಲೆ ಹೇಳಿದ ಹಾಗೆ ಇಸ್ಕಾನ್ ಒಂದು ಇಂಟರ್‌ನ್ಯಾಷ್‌ನಲ್ ಸಂಸ್ಥೆ. ಹೇಳಿ-ಕೇಳಿ ಇದು ಅಮೆರಿಕಾದಲ್ಲಿ ಜನ್ಮ ಪಡೆದದ್ದು. ಅಮೆರಿಕಾದಲ್ಲಿಯಾದ್ರೂ ಇದರ ಇತಿಹಾಸ ನೆಟ್ಟಗೆ ಇದೆಯಾ ಅಂತ ನೋಡಿದ್ರೆ, ಖಂಡಿತಾ ಇಲ್ಲ. ಅಮೆರಿಕಾದಲ್ಲಿ ಇಸ್ಕಾನ್ ಲೈಂಗಿಕ ಹಗರಣಕ್ಕೆ ಸಿಲುಕಿಕೊಂಡಿತ್ತು. ಸಂಸ್ಥೆಯ ವಿದ್ಯಾರ್ಥಿಗಳೇ ಇದಕ್ಕೆ ಬಲಿಯಾಗಿದ್ರು. ಅದಕ್ಕಾಗಿ ೪೨೦ ಕೋಟಿ ರೂಪಾಯಿಗಳ ದೊಡ್ಡ ಮೊತ್ತದ ದಂಡವನ್ನು ಇಸ್ಕಾನ್ ತೆತ್ತಿತ್ತು. ಅದನ್ನು ಬಿಡಿ. ಈಗ ಬೆಂಗಳೂರಿನಲ್ಲಿ ಅದು ಮಾಡಿಕೊಂಡಿರೋ ರಾಡಿ ನೋಡಿ..
ಅದು ೧೯೭೮ರ ಮೇ ತಿಂಗಳು.. ಕರ್ನಾಟಕ ಸೊಸೈಟಿ ರಿಜಿಸ್ಟ್ರೇಷನ್ ಆಕ್ಟ್‌ನಡಿ ಇಸ್ಕಾನ್ ನೊಂದಣಿಯಾಯ್ತು. ಅಷ್ಟರಲ್ಲಾಗ್ಲೆ, ಇಸ್ಕಾನ್ ಸಂಸ್ಥಾಪಕ ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಮರಣ ಹೊಂದಿದರು. ಅವರ ಇಚ್ಛೆಯಂತೆ ಇದನ್ನು ನೊಂದಾಯಿಸಲಾಗಿದ್ರಿಂದ ಇದೊಂದು ಸ್ವತಂತ್ರ ಸಂಸ್ಥೆ. ಹೀಗೆ ಬೆಂಗಳೂರಿನಲ್ಲಿ ಸಂಸ್ಥೆ ಶುರುವಾದ ಬೆನ್ನಲ್ಲೇ ವಿವಾದ ಹುಟ್ಟಿಕೊಂಡಿತು. ಇಸ್ಕಾನ್‌ನ ಮುಂಬಯಿ ಘಟಕ ಬೆಂಗಳೂರಿನ ಈ ಸಂಸ್ಥೆ ತನ್ನ ಸುಪರ್ದಿಗೆ ಬರಬೇಕು ಎಂದು ಪಟ್ಟು ಹಿಡಿಯಿತು. ವ್ಯಾಜ್ಯ ಕೋರ್ಟ್ ಮೆಟ್ಟಲೇರಿತು. ಅಂತಿಮವಾಗಿ ಬೆಂಗಳೂರು ಇಸ್ಕಾನ್ ಕೇಸ್ ಗೆದ್ದಿತು.
ಅದು ೧೯೯೭ ನೇ ಇಸವಿ.
ಇಸ್ಕಾನ್ ಸಂಸ್ಥಾಪಕ ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಅವರ ಜನ್ಮ ಜಯಂತಿ ಪ್ರಯುಕ್ತ ಬೆಂಗಳೂರಿನಲ್ಲಿ ಇಸ್ಕಾನ್ ದೇಗುಲವನ್ನು ಅನಾವರಣಗೊಳಿಸಲಾಯ್ತು. ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ೨೦೦ ಅಡಿ ಎತ್ತರದ ಕಲ್ಲು ಬಂಡೆಗಳಿಂದ ಕೂಡಿದ ಪುಟ್ಟದೊಂದು ಗುಡ್ಡದ ಮೇಲೆ ಅತ್ಯಂತ ಭವ್ಯವಾಗಿ ಈ ದೇಗುಲವನ್ನು ನಿರ್ಮಿಸಲಾಗಿದೆ. ಸುಮಾರು ಏಳು ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ದೇಗುಲ ಇವತ್ತು ಬೆಂಗಳೂರಿನ ಪ್ರಮುಖ ಟೂರಿಂಗ್ ಸ್ಪಾಟ್‌ಗಳಲ್ಲಿ ಒಂದು. ನಿತ್ಯ ಏನಿಲ್ಲವೆಂದರೂ ಸಾವಿರಾರು ಮಂದಿ ಈ ದೇಗುಲಕ್ಕೆ ಭೇಟಿ ನೀಡ್ತಾರೆ
ಇಂತಹ ಈ ದೇಗುಲದ ಆಡಳಿತ ಮಂಡಳಿ ಮತ್ತೆ ವಿವಾದಕ್ಕೆ ಸಿಲುಕಿಕೊಂಡಿತು. ಈ ವಿವಾದ ಇಸ್ಕಾನ್ ಒಡೆತನಕ್ಕೆ ಸಂಬಂಧಿಸಿದ್ದಲ್ಲ. ಬದಲಿಗೆ ಅದು ಹಮ್ಮಿಕೊಂಡಿರುವ ಕಾರ‍್ಯಚಟುವಟಿಗೆ ಮತ್ತು ಸಂಗ್ರಹಿಸುತ್ತಿರುವ ದೇಣಿಗೆಗೆ ಸಂಬಂಧಿಸಿದ್ದು. ಮೊದಲನೆಯದಾಗಿ ಆಧ್ಯಾತ್ಮ ಸಂಸ್ಥೆಯಾದ ಇಸ್ಕಾನ್ ವ್ಯಾಪಾರಿ ಸಂಸ್ಥೆಯಾಗಿ ಪರಿವರ್ತನೆಗೊಂಡಿದೆ. ಇದಕ್ಕೆ ಅದು ಸ್ಥಾಪಿಸಿರುವ ರೆಸ್ಟೋರೆಂಟ್‌ಗಳೇ ಸಾಕ್ಷಿ ಎಂಬ ಅಪಸ್ವರ ಕೇಳಿಬಂತು. ಇದನ್ನು ಅರಗಿಸಿಕೊಳ್ಳುವಷ್ಟರಲ್ಲಿ ಇಸ್ಕಾನ್ ಬೆನ್ನಿಗೇರಿದ್ದು ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುವ ಅಕ್ಷಯ ಪಾತ್ರೆ ಕಾರ‍್ಯಕ್ರಮ. ಮಕ್ಕಳಿಗೆ ಬಿಸಿಯೂಟ ಒದಗಿಸುವ ನೆಪದಲ್ಲಿ ಇಸ್ಕಾನ್ ಕೋಟ್ಯಂತರ ರೂಪಾಯಿ ದೇಣಿಗೆ ಸಂಗ್ರಹಿಸಿ ಅದನ್ನು ದುರುಪಯೋಗಪಡಿಸಿಕೊಂಡಿದೆಯಂತೆ.
ಇಸ್ಕಾನ್ ವ್ಯವಹಾರದಲ್ಲಿ ಡಿ.ಕೆ. ಶಿವಕುಮಾರ್ ಎಂಟ್ರಿಯೊಂದಿಗೆ ಆರೋಪಕ್ಕೆ ಮಹತ್ವ ಬಂದು ಬಿಟ್ಟಿತು. ಮಾತ್ರವಲ್ಲ, ರಾಜಕೀಯ ತಿರುವನ್ನು ಕೂಡ ಈ ಪ್ರಕರಣ ಪಡೆಯತೊಡಗಿತು.
ಡಿ.ಕೆ. ಶಿವಕುಮಾರ್ ಅವರ ಪ್ರಕಾರ, ಇಸ್ಕಾನ್ ಈಗ ಮಾಡುತ್ತಿರುವುದು ಶುದ್ಧ ಮಾನಗೇಡಿ ಕೆಲಸ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಈ ಸಂಸ್ಥೆ ತೊಡಗಿದೆ. ಈ ಸಂಸ್ಥೆಗೆ ಅಕ್ಷರ ದಾಸೋಹ ಯೋಜನೆ ಗುತ್ತಿಗೆ ನೀಡಿರುವುದು ಅಪವಿತ್ರ. ಸರ್ಕಾರಿ ಶಾಲೆ ಮಕ್ಕಳಿಗೆ ಬಿಸಿಯೂಟ ನೀಡುವ ಯೋಜನೆಯನ್ನು ಮುಂದಿಟ್ಟುಕೊಂಡು ಅಮೆರಿಕಾದಲ್ಲಿ ಕೋಟ್ಯಂತರ ರೂಪಾಯಿ ದೇಣಿಗೆಯನ್ನು ಇಸ್ಕಾನ್ ಸಂಗ್ರಹಿಸುತ್ತಿದೆಯಂತೆ. ಹೀಗೆ ಸಂಗ್ರಹವಾದ ಹಣವನ್ನು ರಿಯಲ್ ಎಸ್ಟೇಟ್ ಸೇರಿದಂತೆ ಇತರ ವ್ಯವಹಾರಗಳಲ್ಲಿ ತೊಡಗಿಸುತ್ತಿದೆಯಂತೆ.
ಅಷ್ಟಕ್ಕೂ, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಆರಂಭಿಸಿದ್ದು ಅಂದಿನ ಎಸ್.ಎಂ. ಕೃಷ್ಣ ಸರ್ಕಾರ. ಆವತ್ತು ಕೃಷ್ಣ ಸಂಪುಟದಲ್ಲಿ ಮಂತ್ರಿಯಾಗಿದ್ದ ಡಿ.ಕೆ. ಶಿವಕುಮಾರ್, ಇಸ್ಕಾನ್‌ನ ಅಕ್ಷಯಪಾತ್ರೆ ಯೋಜನೆಗೆ ತಮ್ಮ ಸಂಪೂರ್ಣ ಸಮ್ಮತಿ ಸೂಚಿಸಿದ್ದರು. ಆವತ್ತು ಸುಮ್ಮನಿದ್ದ ಶಿವಕುಮಾರ್, ಇವತ್ತು ಇಸ್ಕಾನ್ ವ್ಯವಹಾರದಲ್ಲಿ ಮೂಗು ತೂರಿಸುತ್ತಿರುವುದೇಕೆ ಅಂದ್ರೆ.. ಇಸ್ಕಾನ್ ಮಂದಿ ಅದನ್ನು ಸಮರ್ಥಿಸಿಕೊಳ್ತಾರೆ.
ಅಂದ್ರೆ, ಎರಡೂ ಕಡೆಯಿಂದ ಪ್ಯೂರ‍್ಲಿ ಇದೊಂದು ರಿಯಲ್ ಎಸ್ಟೇಟ್ ಇಂಟರೆಸ್ಟ್. ಲಾಭ-ನಷ್ಟದ ಲೆಕ್ಕಾಚಾರ. ಅದಕ್ಕಾಗಿಯೇ ಇಷ್ಟೆಲ್ಲಾ ರಂಪಾಟ. ಆದ್ರೆ.. ವಿಷಯ ಇಷ್ಕಕ್ಕೆ ಸೀಮಿತವಾಗಿಲ್ಲ.
ಯಾವುದೇ ಪ್ರಾಬ್ಲಂ ಅಥವಾ ವಿವಾದದ ಹಿಂದೆ ಕುರುಡು ಕಾಂಚಾಣದ ಮಹಿಮೆ ಇರುತ್ತಂತೆ. ಈ ಪ್ರಕರಣದಲ್ಲೂ ಕೂಡ ಅದು ಕೆಲಸ ಮಾಡಿದೆ. ಇವತ್ತು ಇಸ್ಕಾನ್ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಸಂಘರ್ಷಕ್ಕೆ ರಿಯಲ್ ಎಸ್ಟೇಟ್ ಇಂಟರೆಸ್ಟೇ ಮುಖ್ಯ ಕಾರಣವಂತೆ. ಈ ಸಂಘರ್ಷ ಎಲ್ಲಿವರ‍್ಗೆ ಹೋಗಿದೆ ಎಂದ್ರೆ... ಶಿವಕುಮಾರ್‌ರನ್ನು ಕೆಪಿಸಿಸಿ ಕಾರ‍್ಯಾಧ್ಯಕ್ಷ ಸ್ಥಾನದಿಂದ ಪಚಚ್ಯುತಿಗೊಳಿಸುವ ಮಟ್ಟದವರೆಗೆ.
ರಿಯಲ್ ಎಸ್ಟೇಟ್ ಅಂದ್ಮೇಲೆ ಕುರುಡು ಕಾಂಚಾಣ ಸದ್ದು ಮಾಡ್ದೆ ಇರುತ್ತಾ ? ಇಲ್ಲಾಗಿದ್ದು ಅದೇ. ಕನಕಪುರದ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವಾಗ ವ್ಯವಹಾರ ಕುದುರಲಿಲ್ಲವೋ.. ಅಲ್ಲಿಂದಾಚೆಗೆ ಇಸ್ಕಾನ್ ವಿರುದ್ಧ ಶಿವಕುಮಾರ್ ಕತ್ತಿ ಮಸೆಯತೊಡಗಿದರಂತೆ. ಹಾಗಿದ್ರೆ, ಇಸ್ಕಾನ್‌ಗೂ ರಿಯಲ್ ಎಸ್ಟೇಟ್ ಇಂಟರೆಸ್ಟ್ ಇದೆಯೇ ? ವಿದೇಶಗಳಲ್ಲಿ ಬಡಮಕ್ಕಳ ಫೋಟೋ ತೋರಿಸಿ ದುಡ್ಡು ಮಾಡ್ತಿರೋ ಅದರ ಕ್ರಮ ಸರಿಯೇ?
ಅಕ್ಷರ ದಾಸೋಹ. ಇದು ಆಗಿನ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಕಾರ‍್ಯಕ್ರಮಗಳಲ್ಲೊಂದು. ಆಗ ಮುಖ್ಯಮಂತ್ರಿ ಗಾದಿ ಮೇಲೆ ಕೂತಿದ್ದವರು ಈಗಿನ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ. ಅವರ ಸರ್ಕಾರ ಅಕ್ಷರ ದಾಸೋಹ ಕಾರ‍್ಯಕ್ರಮವನ್ನು ಖಾಸಗಿ ಸಹಭಾಗಿತ್ವದಲ್ಲಿ ನಡೆಸಲು ಯೋಜನೆ ರೂಪಿಸಿತು. ಅದರ ಪರಿಣಾಮವೇ ಇಸ್ಕಾನ್ ಸಂಸ್ಥೆಯ ಅಕ್ಷಯಪಾತ್ರೆ ಯೋಜನೆ. ಈ ಯೋಜನೆಯನ್ನು ಇಸ್ಕಾನ್ ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ ಅನ್ನೋದಂತೂ ನಿಜ.
ಆದ್ರೆ, ಇದಿಷ್ಟೆ ನಿಜವಲ್ಲ. ಡಿ.ಕೆ. ಶಿವಕುಮಾರ್ ಆರೋಪಿಸಿರುವ ಹಾಗೆ, ವಿದೇಶಗಳಲ್ಲಿ ನಮ್ಮ ಬಡ ಮಕ್ಕಳ ಚಿತ್ರವನ್ನು ತೋರಿಸಿ ಇಸ್ಕಾನ್ ಹಣ ಸಂಗ್ರಹಿಸುತ್ತಿರುವುದೂ ಅಷ್ಟೆ ನಿಜ. ಹೀಗೆ ಹಣ ಸಂಗ್ರಹಿಸಲು ನಿಮಗೆ ಅದ್ಯಾರು ಅನುಮತಿ ಕೊಟ್ರೂ ಅಂದ್ರೆ.. ಇಸ್ಕಾನ್ ಮಂದಿ ಹೇಳೋದು: ನಿಯಮದನ್ವಯವೇ ನಾವು ಈ ಹಣ ಸಂಗ್ರಹಿಸುತ್ತಿದ್ದೇವೆ; ಇದ್ರಲ್ಲಿ ಯಾವುದೇ ಮುಚ್ಚುಮರೆಯಿಲ್ಲ ಅಂತ.
ನಿಜ ಸ್ವಾಮಿ ನಿಜ. ನೀವು ವಿದೇಶದಲ್ಲಿ ನಮ್ಮ ಮಕ್ಕಳ ಫೋಟೋ ತೋರಿಸಿ ಹಣ ಸಂಗ್ರಹಿಸುತ್ತಿರುವುದು ನಿಜ. ಆ ಹಣ ಅಕ್ಷಯ ಪಾತ್ರೆಗೆ ಮಾತ್ರ ಸದ್ವಿನಿಯೋಗವಾಗ್ತಾ ಇದ್ಯಾ ಅಥವಾ ಬೇರೆ ಬೇರೆ ಉದ್ದೇಶಗಳಿಗೆ ಸದ್ಬಳಕೆ ಆಗ್ತಿದ್ಯಾ ಅಂದ್ರೆ, ಡಿಕೆಶಿ ಆರೋಪಗಳ ಪಟ್ಟಿಯನ್ನೇ ಮುಂದಿಡ್ತಾರೆ.
ಇಲ್ಲೊಂದು ಮಾತು. ಕರ್ನಾಟಕದಲ್ಲಿ ಅಕ್ಷರ ದಾಸೋಹ ಕಾರ‍್ಯಕ್ರಮವೇ ಇರಲಿಲ್ಲ ಅಂತ ಅನ್ಕೊಳ್ಳಿ. ಆಗ ತಾಯಿ-ತಂದೆ ತಮ್ಮ ಮಕ್ಕಳನ್ನೇನೂ ಉಪವಾಸ ಇರಿಸ್ತಿರಲಿಲ್ಲ ಅನ್ನೋದು ಅಷ್ಟೇ ನಿಜ. ತಮ್ಮ ಹೊಟ್ಟೆಬಟ್ಟೆ ಕಟ್ಟಿಯಾದ್ರೂ ಮಕ್ಕಳನ್ನು ಸಾಕೋ ತಾಕತ್ತು ಕನ್ನಡಮಂದಿಗೆ ಯಾವತ್ತು ಇದ್ದೇ ಇದೆ. ಹಾಗಂತ ನಾವು ಅಕ್ಷರ ದಾಸೋಹ ಕಾರ‍್ಯಕ್ರಮ ವಿರೋಧಿಸ್ತಿದ್ದೇವೆ ಅಂತ ಅಲ್ಲ. ಅಷ್ಟಕ್ಕೂ ಸರ್ಕಾರ ಅಕ್ಷರ ದಾಸೋಹ ಕಾರ‍್ಯಕ್ರಮ ರೂಪಿಸಿದ್ದು ತನ್ನ ಜನಪ್ರಿಯತೆಗೋಸ್ಕರ ಅನ್ನೋದು ಅಷ್ಟೆ ನಿಜ. ಇರಲಿ, ಈ ವಿಷಯ ಬೇರೆ. ಈಗ ನೋಡಿ ಹೀಗೆ ಮಕ್ಕಳ ಹೆಸರಲ್ಲಿ ದೇಣಿಗೆ ಸಂಗ್ರಹಿಸುತ್ತಿರುವ ಇಸ್ಕಾನ್, ಅದನ್ನು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸುತ್ತಿದೆಯಂತೆ..
ಇದೇ ಡಿ.ಕೆ. ಶಿವಕುಮಾರ್, ವಿಧಾನಮಂಡಲದಲ್ಲಿ ನೀಡಿರುವ ಹೇಳಿಕೆ ಇದು. ಆ ಪ್ರಕಾರ, ಇಸ್ಕಾನ್ ಸಂಸ್ಥೆ, ‘ಇಂಡಿಯಾ ಹೆರಿಟೇಜ್ ಟ್ರಸ್ಟ್’ ಹೆಸರಿನಲ್ಲಿ ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಭೂಮಿ ಖರೀದಿಸಿ ೨ ಸಾವಿರ ಫ್ಲ್ಯಾಟ್‌ಗಳನ್ನು ನಿರ್ಮಿಸಿದೆ. ಅಷ್ಟೇ ಅಲ್ಲ, ಅದನ್ನು ಮಾರಾಟ ಕೂಡ ಮಾಡಿದೆಯಂತೆ. ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸುಮಾರು ೧೦೦ ಎಕರೆಯಲ್ಲಿ ಐಷಾರಾಮಿ ವಿಲ್ಲಾಗಳನ್ನು ನಿರ್ಮಿಸಿ ಮಾರಿದೆಯಂತೆ. ಇದಿಷ್ಟೆ ಅಲ್ಲ, ತಿರುಪತಿ, ಚೆನ್ನೈ, ಜೈಪುರ, ಶ್ರೀರಂಗಪಟ್ಟಣ ಮತ್ತಿತರ ಕಡೆ ರೆಸಾರ್ಟ್‌ಗಳನ್ನು ನಿರ್ಮಿಸಿದೆಯಂತೆ. ತಮ್ಮ ಈ ಆರೋಪಗಳು ಸುಳ್ಳೇನಲ್ಲ. ಅದಕ್ಕೆ ಇಲ್ಲಿದೆ ಪ್ರಮಾಣಪತ್ರ ಎನ್ನುತ್ತಾರೆ ಶಿವಕುಮಾರ್.
ಇಷ್ಟೆಲ್ಲಾ ರಾದ್ಧಾಂತವಾದ ಮೇಲೆ ಸರ್ಕಾರ ಕಣ್ಮುಚ್ಚಿಕೊಂಡು ಸುಮ್ಮನೆ ಕೂರುವುದಾದ್ರೂ ಹೇಗೆ ? ಯಾವಾಗ ಶಿವಕುಮಾರ್ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಿದರೋ, ಒತ್ತಡಕ್ಕೆ ಸಿಲುಕಿದ ಸರ್ಕಾರ ಇಸ್ಕಾನ್ ವ್ಯವಹಾರಗಳ ತನಿಖೆಗೆ ಜಂಟಿ ಸದನ ಸಮಿತಿಯನ್ನು ರಚಿಸಿದೆ. ಈ ಸಮಿತಿಯಲ್ಲಿ ಶಿವಕುಮಾರ್ ಕೂಡ ಸದಸ್ಯರು. ಅದಕ್ಕೆ ಇಸ್ಕಾನ್ ಆಕ್ಷೇಪ ಕೂಡ ವ್ಯಕ್ತವಾಗಿದೆ. ಆದ್ರೆ, ಅದಕ್ಕೆ ಶಿವಕುಮಾರ್ ಜಗ್ತಿಲ್ಲ.
ಇಷ್ಟು ಮಾತ್ರ ಅಲ್ಲ, ಇಸ್ಕಾನ್ ದೇವಾಲಯದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಕೂಡ ನಡೆಯುತ್ತಿದೆಯಂತೆ. ದೇವಸ್ಥಾನಕ್ಕೆ ಭೇಟಿ ನೀಡಿ ಮಹಿಳೆಯರನ್ನು ಕೈಹಿಡಿದೆಳೆಯುವುದು ಮತ್ತಿತರ ಅನುಚಿತ ಘಟನೆಗಳು ಜರುಗಿವೆ ಅನ್ನೋದು ಶಿವಕುಮಾರ್ ಕಿಡಿ. ಡಿಕೆಶಿ ಈ ಆರೋಪಗಳನ್ನು ಇಸ್ಕಾನ್ ಮೇಲೆ ಪದೇ ಪದೇ ಮಾಡುತ್ತಲೆ ಬಂದಿದ್ದಾರೆ. ಇದ್ರಿಂದ ಕೆರಳಿದ ಇಸ್ಕಾನ್ ಮಂದಿ ಶಿವಕುಮಾರ್ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನೂ ಹೂಡಿದ್ದಾರೆ.
ಇದ್ಯಾವುದಕ್ಕೂ ಜಗ್ಗದ ಡಿಕೆಶಿ ಮಾತ್ರ ಇಸ್ಕಾನ್ ವಿರುದ್ಧದ ಹೋರಾಟ ಮುಂದುವರಿಸುವುದಾಗಿ ಸಾರಿದ್ದಾರೆ. ಇಲ್ಲೊಂದು ಪ್ರಶ್ನೆ: ರಾಜ್ಯವನ್ನು ಕಾಡುತ್ತಿರುವ ಹಾಗೂ ಹಾದಿ ತಪ್ಪಿರುವ ಸರ್ಕಾರವನ್ನು ಸರಿದಾರಿಗೆ ತರುವ ಗುರುತರ ಜವಾಬ್ದಾರಿ ಶಿವಕುಮಾರ್ ಮೇಲಿದೆ. ಅಂತಹದ್ರಲ್ಲಿ ಇಸ್ಕಾನ್ ವಿಷಯಕ್ಕೆ ಅದ್ಯಾಕೆ ಇಷ್ಟೊಂದು ತಲೆ ಕೆಡಿಸಿಕೊಂಡಿದ್ದಾರೆ ಅನ್ನೋ ಸಣ್ಣ ಅನುಮಾನ ಮೂಡದೇ ಇರಲಾರದು. ಹಾಗೆಯೇ ಇಸ್ಕಾನ್ ವ್ಯವಹಾರಗಳು ಕೂಡ ಅನುಮಾನಕ್ಕೆ ಆಸ್ಪದ ತರುವಂತಹವೇ ಆಗಿವೆ. ಅಷ್ಟಕ್ಕೂ ನಮಗೆ ಸಾಕಲು ಯೋಗ್ಯತೆ ಇಲ್ಲ. ವಿದೇಶದಲ್ಲಿ ನೀವು ಭಿಕ್ಷೆ ಬೇಡಿ ನಮ್ಮ ಮಕ್ಕಳಿಗೆ ಅನ್ನ ಹಾಕಿ ಅಂತ ಯಾವ ತಂದೆ ತಾಯಿ ಕೂಡ ಇಸ್ಕಾನ್‌ಗೆ ಅರ್ಜಿ ಹಾಕಿಕೊಂಡಿಲ್ಲ. ಇದಿಷ್ಟೆ ಅಲ್ಲ, ಇಸ್ಕಾನ್ ಸೇವೆ ಭಕ್ತರಿಗೋಸ್ಕರ ಅನ್ನೋದಾದ್ರೆ.. ಇಸ್ಕಾನ್ ಕಣ್ಣಿಗೆ ಹೈಫೈ ಭಕ್ತರು ಮಾತ್ರ ಕಾಣಿಸುತ್ತಾರೆಯೇ ? ಇವತ್ತಿಗೂ ನಮ್ಮ ಹಳ್ಳಿಗಳಲ್ಲಿ ದೈನೇಸಿ ಬದುಕು ದೂಡುತ್ತಿರುವ ಸಮಾಜದ ಕಟ್ಟಕಡೆಯ ಜನ ಇವರ ಕಣ್ಣಿಗೆ ಬೀಳುವುದಿಲ್ಲವೇ ಅನ್ನೊ ಪ್ರಶ್ನೆ ಇಲ್ಲಿ ಉದ್ಭವಿಸುವುದು ಸಹಜ.
ಹೈಫೈ ದೇಗುಲಗಳನ್ನು ಕಟ್ತಾರೆ. ಜನರಿಂದ ಹಣ ಸಂಗ್ರಹಿಸ್ತಾರೆ. ಭಕ್ತರ ಸೇವೆಗೆಂದು ರೆಸಾರ್ಟ್‌ಗಳನ್ನು ನಿರ್ಮಿಸ್ತಾರೆ. ಆದ್ರೆ, ಇಷ್ಟೆಲ್ಲಾ ಮಾಡೋ ಈ ಮಂದಿ ಹಳ್ಳಿಗಳನ್ನು, ಬಡವರನ್ನು ಮರೀತಾರೆ! ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನೇ ಇದನ್ನು ಮೆಚ್ಚುವುದಿಲ್ಲ ಅನ್ಸುತ್ತೆ. ಇದೇ ವೇಳೆ, ನಮ್ಮನ್ನಾಳುವ ರಾಜಕಾರಣಿಗಳ ವರ್ತನೆ ಕೂಡ ಬದಲಾಗಲೇಬೇಕಿದೆ. ಸ್ವಂತ ಹಿತಾಸಕ್ತಿಗಿಂತ ಜನ ಹಿತಾಸಕ್ತಿಯೇ ಮೇಲು ಅನ್ನೋ ಧೋರಣೆಯನ್ನು ನಮ್ಮ ನಾಯಕಮಣಿಗಳು ತಾಳಬೇಕಿದೆ. ದೇವ್ರು ಅವ್ರಿಗೆ ಆ ಬುದ್ಧಿ ಕೊಡ್ಲಿ.
- ಅಲೀಂ
No comments:
Post a Comment