Friday, 18 June 2010

ನೈತಿಕ ನೆಲೆಯಲ್ಲಿ ನಿತ್ಯಾನಂದ..

ನೀವು ಸುಲಭವಾಗಿ ಹೆಸರು ಮಾಡ್ಬೇಕಾ? ಹಣದ ಹೊಳೆ ನಿಮ್ಮ ಪಾದ ತಳದಲ್ಲಿ ಹರೀಬೇಕಾ? ಹಾಗಿದ್ರೆ ಅದಕ್ಕಿಲ್ಲಿದೆ ನೋಡಿ ಕ್ರಿಮಿನಲ್ ಐಡಿಯಾ.


ಅದೇನಂದ್ರೆ ಸಿಂಪಲ್ ಆಗಿ ವೇಷ ಹಾಕ್ಬೇಕು. ಜನರನ್ನ ನಂಬಿಸಬೇಕು. ಆಗೇನು ಆಗುತ್ತೇ ಗೊತ್ತಾ? ಜನ ಮರುಳೋ.. ಜಾತ್ರೆ ಮರುಳೋ ಅಂತಾರಲ್ಲ, ಹಾಗಾಗುತ್ತೆ ಕಥೆ.

ಹೌದು, ಈಗ ನಾನು ಹೇಳಕ್ಕೆ ಹೊರಟಿರೋದು ಅಂತಹುದ್ದೆ ಕಥಾನಕವನ್ನ.

ಸನ್ಯಾಸಾಶ್ರಮ ಅಂದ್ರೆ ಅದೊಂದು ಆದರ್ಶಮಯ ಜೀವನ ಅನ್ನೋ ಕಾಲವೊಂದಿತ್ತು. ಆದ್ರೆ, ಹೇಳಿ ಕೇಳಿ ಇದು ಕಲಿಗಾಲ. ಈ ಕಾಲದಲ್ಲಿ ಅದೇನೇನು ನಡೆಯುತ್ತೆ ಅಂತ ಯಾರಿಗೆ ತಾನೆ ಗೊತ್ತು ಹೇಳಿ? ಕಲಿಗಾಲ ಅನ್ನೋ ಈ ಆಧುನಿಕ ಯುಗದಲ್ಲಿ ಕೆಲವರಿಗೆ ದೇವರು ಕೂಡ ಬಂಡವಾಳ. ಅಷ್ಟೆ ಅಲ್ಲ, ಧ್ಯಾನ, ಸನ್ಯಾಸಾಶ್ರಮ ಅನ್ನೋದು ಬರೀ ಮೋಕ್ಷಕ್ಕೆ ಮಾತ್ರ ದಾರಿ ಅಲ್ಲ. ಕಣ್ಣ ರೆಪ್ಪೆ ಮುಚ್ಚಿ ಕಣ್ಣು ತೆರೆಯುವಷ್ಟರಲ್ಲಿ ಹಣ-ಹೆಸರು ಮಾಡೋ ಹೊಸ ಐಡಿಯಾನೂ ಹೌದು.

ಹಾಗಂತ ಎಲ್ರೂ ಇದೇ ತರ ಇರ‍್ತಾರೆ ಅಂತ ಅಲ್ಲ. ನಮ್ಮ-ನಿಮ್ಮ ನಡುವೆ ಒಳ್ಳೆಯವ್ರು ಇರ‍್ತಾರೆ, ಕೆಟ್ಟವ್ರು ಇರ‍್ತಾರೆ. ಆದ್ರೆ, ಯಾರು ಒಳ್ಳೆಯವ್ರು ಮತ್ತು ಅದ್ಯಾರು ಕೆಟ್ಟವ್ರು ಅಂತ ಗೊತ್ತಾಗೋದು ಅವ್ರ ನಿಜ ಬಣ್ಣ ಬಯಲಾದಾಗ ಮಾತ್ರ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಸ್ವಾಮಿ ನಿತ್ಯಾನಂದ.

ಈ ಸನ್ಯಾಸಿ ಮಾಡಿದ ತಪ್ಪಾದ್ರೂ ಏನು ಅನ್ನೋದು ಈಗಾಗ್ಲೆ ಜಗಜ್ಜಾಹೀರ. ಹಾಗಂತ ತಪ್ಪೇ ಮಾಡದೇ ಇರೋರು ಇಲ್ಯಾರಿದ್ದಾರೆ? ನಾನು ಸಂಪೂರ್ಣ ಪರಿಪೂರ್ಣ ಅಂತ ಎದೆತಟ್ಕೊಂಡು ಹೇಳೋ ಮಂದಿ ನಮ್ಮ ನಿಮ್ಮ ನಡುವೆ ಖಂಡಿತವಾಗಿಯೂ ಇಲ್ಲ ಅಂತಾನೆ ಹೇಳ್ಬಹುದೇನೋ.

ನಿತ್ಯಾನಂದ ಕೂಡ ಇದಕ್ಕೆ ಹೊರತಲ್ಲ ಅಂತ ಸುಮ್ಮನಾಗಿಬಿಡಬಹುದಿತ್ತು. ಆದರೆ, ವಿಷಯ ಹಾಗಿಲ್ಲ. ತಾನು ಸಾಚಾ ಆಗಿದು, ಸಮಾಜಕ್ಕೆ ಆದರ್ಶ ಬೋಧಿಸಬೇಕಿದ್ದ ಈ ಕಾವಿಧಾರಿ ಅತ್ಯಂತ ಅಸಹ್ಯಕರ ರೀತಿಯಲ್ಲಿ ಸಿಕ್ಕಿಬಿದ್ದ. ಆತನ ಕಾಣದ ಮುಖ ಹೀನಾಯವಾಗಿ ಬಯಲಾಯ್ತು.

ಹೀಗೆ ವಿಷಯ ಬಯಲಾಗಿದ್ದೆ ತಡ, ಮಾನ-ಮರ್ಯಾದೆ ಉಳಿಸಿಕೊಳ್ಳಲು ಹಾಗೂ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸ್ವತಃ ದೇವಮಾನವ ಅನಿಸಿಕೊಂಡಿರೋ ನಿತ್ಯಾನಂದ ಪರದಾಡಿದ ಪರಿ ಇದೆಯಲಾ, ಅದೇ ಒಂದು ರೋಚಕ ಕಥಾನಕ. ಇಲಿ ಬಿಲವನ್ನು ಹೊಕ್ಕಂತೆ, ಯಾರಿಗೂ ಸಿಕ್ಕದಂತೆ ಉತ್ತರದ ನಾಡುಗಳಲ್ಲಿ ಅಡಗಿಕೊಳ್ಳಲು ನಿತ್ಯಾನಂದ ಹುಡುಕದ ತಾಣಗಳಿಲ್ಲ. ಮುಖ ಮುಚ್ಚಿಕೊಳ್ಳಲು ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ. ಕೊನೆಗೊಂದು ದಿನ ನಿತ್ಯಾನಂದ ವಾಸ್ ಅಂಡರ್ ಅರೆಸ್ಟ್.

ತಾನು ಅಡಗಿಕೊಂಡಿದ್ದ ತಾಣವನ್ನು ಭೇದಿಸಿ ಪೊಲಿಸ್ರು ಅರೆಸ್ಟ್ ಮಾಡಿದ್ರೂ ಈತ ಮಾತ್ರ ಹಸನ್ಮುಖಿ. ಅದೇನೋ ಹೇಳ್ತಾರಲ್ಲಾ, ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅಂತ. ಹಾಗಾಯಿತು ನಿತ್ಯಾನಂದನ ಪರಿ. ಇರಲಿ ಈ ವಿಷಯ ಬೇರೆ. ಅಷ್ಟಕ್ಕೂ ನಿತ್ಯಾನಂದ ಅರೆಸ್ಟ್ ಆದ ವಿಷಯ ಇದೆಯಲ್ಲಾ, ಆವತ್ತಿಗೆ ಅದೇ ಒಂದು ದೊಡ್ಡ ಮಜುಗರದ ಪ್ರಸಂಗ.

ಮುಜುಗರಕ್ಕೆ ಒಂದಷ್ಟು ಮಣ್ಣಾಕ್ತು. ನಾನೇನು ಮಾಡಬಾರದನ್ನ ಮಾಡಿದ್ದೀನಿ ಅಂತ ಈ ಕಾವಿಧಾರಿ ಸ್ವಾಮಿ ಅನ್ಕೊಂಡಿರಬಹುದು. ಅದು ಸರಿನೇ ಬಿಡಿ. ಕಾವಿ ಧರಿಸಿಕೊಂಡೇ ಈತ ಹೆಣ್ಣೊಬ್ಬಳ ಸಂಗ ಮಾಡಿದ ವಿಷಯ ಜಗಜ್ಜಾಹೀರಾಗಿದ್ದು; ಪೊಲೀಸ್ರು ಇವನನ್ನ ಅರೆಸ್ಟ್ ಮಾಡಿದ್ದು ಎಲ್ಲದೂ ಹಳೆ ವಿಷಯವೇ. ಆದ್ರೆ, ನಿಜವಾಗ್ಲು ಇದ್ರಲ್ಲಿ ಈತನ ತಪ್ಪಿತ್ತೆ? ಅಥವಾ ಬೇಕಂತ್ಲೆ ಇವನನ್ನು ಸಿಕ್ಕಿಹಾಕಿಸಲಾಯಿತೇ? ಏನೇ ಆದ್ರೂ, ಅಡಿಕೆಗೆ ಹೋದ ಮಾನ ಆನೆ ಕೊಟ್ರೂ ಬರಲ್ವಂತೆ. ಹಾಗಾಯಿತು ನಿತ್ಯಾನಂದನ ಕತೆ.

‘ಹೆಣ್ಣೊಬ್ಬಳ ಸಂಗ ಮಾಡಿ ನಿತ್ಯಾನಂದ ಮಾಡಿಕೊಂಡಿದ್ದು ಶುದ್ಧ ಅವಿವೇಕಿ ಕೆಲಸ. ಅಷ್ಟೇ ಅಲ್ಲ, ನಂಬಿದ ಭಕ್ತರ ಭಾವನೆಗಳಿಗೆ ಎಸಗಿದ ದ್ರೋಹ ಅಂತ ಹೇಳೋರ ಸಂಖೈ ಕಡಿಮೆ ಏನಿಲ್ಲ. ಮಾಡಿದ ದ್ರೋಹಕ್ಕೆ ಪ್ರಾಯಶ್ಚಿತ್ತಪಡಬೇಕಾದ ಈ ಕಾವಿಧಾರಿ ಅದೊಂದನ್ನು ಬಿಟ್ಟು ಎಲ್ಲವನ್ನೂ ಮಾಡ್ತಾ ಆರಾಮಾಗಿದ್ದಾನೆ. ಅಸಲಿಗೆ, ಸೆಕ್ಸ್ ಸ್ಕ್ಯಾಂಡಲ್‌ನಲ್ಲಿ ಸಿಕ್ಕಿಬಿದ್ದ ಈ ಸ್ವಾಮೀಜಿಯ ಅಸಲಿ ರೂಪವೇನು? ಈತ ಹೇಳುವಂತೆ, ಈತನ ಸೆಕ್ಸ್ ಸ್ಕ್ಯಾಂಡಲ್ ಪೂರ್ವನಿಯೋಜಿತ ಪಿತೂರಿನಾ ಅಥವಾ ಸಹಜನಾ? ಕುತೂಹಲವಂತು ಇದ್ದೇ ಇದೆ ಅಲ್ವಾ ?

ನೀವು ಒಮ್ಮಿಂದೊಮ್ಮೆಗೇ ಪ್ರಚಾರಕ್ಕೆ ಬರಬೇಕಾ? ಆ ಪ್ರಚಾರ ಪಾಸಿಟಿವ್‌ನೋ ಅಥವಾ ನೆಗೆಟೀವ್‌ನೋ ಗೊತ್ತಿಲ್ಲ. ಒಟ್ಟಿನಲ್ಲಿ ಪ್ರಚಾರ ಸಿಕ್ಕರೆ ಪಾಪ್ಯುಲಾರಿಟಿ ತಾನೇ ಬರುತ್ತದೆ. ಈಗ ನಿತ್ಯಾನಂದನ ವಿಷಯದಲ್ಲಿ ಆಗಿರೋದು ಅದೇ. ಸೆಕ್ಸ್ ಸ್ಕ್ಯಾಂಡಲ್ ಬೆಳಕಿಗೆ ಬಂದ ಮೇಲೆ ನಿತ್ಯಾನಂದನ ಪಾಪ್ಯುಲಾರಿಟಿ ಇನ್ನೂ ಹೆಚ್ಚಾಗಿದೆಯಂತೆ. ಇದು ಎಷ್ಟರ ಮಟ್ಟಿಗೆ ನಿಜ ಅನ್ನೋದು ಬೇರೆ ವಿಷಯ. ಅಷ್ಟಕ್ಕೂ ಈತನ ಸೆಕ್ಸ್ ಸ್ಕ್ಯಾಂಡಲ್‌ನ ಹಕೀಕತ್ತು ಏನು? ಈ ಸ್ಕ್ಯಾಂಡಲ್ ಹಿಂದೆ ಕಾಣದ ಕೈ ಕೆಲಸ ಮಾಡಿದೆಯೇ? ಹೀಗೆ ಪ್ರಶ್ನೆ ಹಾಕಿಕೊಂಡ್ರೆ ಹೊಳೆಯುವ ಹೆಸ್ರು ಅಂದ್ರೆ...

ನಿತ್ಯಾನಂದ ವರ್ಸಸ್ ರವಿಶಂಕರ ಗುರೂಜಿ

ಯಸ್. ಒಬ್ಬರು ಕಾವಿಧಾರಿ ಮತ್ತೊಬ್ಬರು ಶ್ವೇತವಸ್ತ್ರಧಾರಿ. ಆಧ್ಯಾತ್ಮ ಮತ್ತು ಧ್ಯಾನ ಈ ಇಬ್ಬರ ನಡುವಿನ ಸಾಮ್ಯ. ಈ ಸಾಮ್ಯ ಇಷ್ಟಕ್ಕೆ ಮುಗಿಯಲ್ಲ. ರವಿಶಂಕರ ಗುರೂಜಿ ಅವರ ಆರ್ಟ್ ಲಿವಿಂಗ್ ಮತ್ತು ನಿತ್ಯಾನಂದನ ಧ್ಯಾನಪೀಠ ಆಶ್ರಮದ ನೆಲೆ ಒಂದೇ. ಅದೇ ಬೆಂಗಳೂರು.

ಇಲ್ಲೊಂದು ಮಾತು. ಹತ್ತು ವರ್ಷದ ಹಿಂದಕ್ಕೆ ಪುಟ ತಿರುವಿ ಹಾಕಿ. ನಿತ್ಯಾನಂದ ಅಥವಾ ರವಿಶಂಕರ್ ಗುರೂಜಿ ಅವರ ಕಲರವ ನಮ್ಮ ಈ ಬೆಂಗಳೂರಿನಲ್ಲಿ ಇರ‍್ಲೇ ಇಲ್ಲ. ಆದ್ರೆ, ನೋಡನೋಡುತ್ತಿದ್ದಂತೆ ಅವರ ಕ್ರಿಯೆ, ಚಟುವಟಿಕೆ, ಪ್ಲಾನ್ ಮತ್ತು ಪ್ರಚಾರ ಇವರನ್ನು ಜಗದಗಲಕ್ಕೆ ಬೆಳೆದು ನಿಲ್ಲುವಂತೆ ಮಾಡಿಬಿಟ್ತು. ಪಾಪ್ಯುಲಾರಿಟಿಯನ್ನು ತಂದು ಕೊಟ್ಟಿತು. ಬೆನ್ನಲ್ಲೆ ಅನುಯಾಯಿಗಳ ಸಂಖ್ಯೆಯೂ ಹೆಚ್ಚತೊಡಗಿತು. ಅಂಗೈಯಲ್ಲೇ ಸ್ವರ್ಗವನ್ನು ತೋರಿಸುವ ಚಮತ್ಕಾರಗಳೂ ನಡೆದು ಹೋದವು.

ಮೊದಮೊದಲು ಆರ್ಟ್ ಆಫ್ ಲಿವಿಂಗ್‌ಗೆ ಕಾಂಪಿಟೇಟರ್ ಅನ್ನೋರು ಯಾರು ಇರಲಿಲ್ಲ. ಆದ್ರೆ, ಈಗ ನೋಡಿ. ಪಕ್ಕದಲ್ಲೆ ಶುರುವಾಯಿತು ಸವತಿ ಮತ್ಸರ. ಅದೇ, ಸ್ವಾಮಿ ನಿತ್ಯಾನಂದನ ಧ್ಯಾನಪೀಠ. ಸವತಿ ಮತ್ಸರ ಅಂದ್ಮೇಲೆ ಕೇಳಬೇಕೆ? ಈರ್ಷೆ ಅನ್ನೋದು ಮನುಷ್ಯ ಸಹಜ ಗುಣ ತಾನೆ ? ನೋಡನೋಡುತ್ತಿದ್ದಂತೆ ಒಬ್ಬರನ್ನೊಬ್ಬರು ಮೀರಿಸಲು ತೊಡಗಿದರು. ದೇಶ-ವಿದೇಶಿಯರನ್ನು ಗುಂಪುಗುಂಪಾಗಿ ಸೆಳೆಯತೊಡಗಿದರು.

ಅದೊಂದು ದಿನ ನಿತ್ಯಾನಂದನ ಲೀಲೆ ಟಿವಿಯಲ್ಲಿ ಬಹಿರಂಗವಾಗಿದ್ದೇ ತಡ, ರವಿಶಂಕರ್ ಗುರೂಜಿ ಖುಷಿಯಿಂದ ಎದ್ದುಬಿಟ್ಟರು. ಇಷ್ಟು ದಿನ ಮನಸ್ಸಿನಲ್ಲಿದ್ದ ಟೀಕೆಗಳೆಲ್ಲ ಹೊರಬರತೊಡಗಿದವು. ನಿತ್ಯಾನಂದನನ್ನು ಬಹಿರಂಗವಾಗಿಯೇ ಟೀಕಿಸಿದರು. ಇದೆಲ್ಲ ಆದ ನಂತರ, ನನಗ್ಯಾರು ಸಾಟಿ ಅಂದ್ಕೊತಿದ್ದವರಿಗೆ ಇನ್ನೊಂದು ವರ ಅನಾಯಾಸವಾಗಿ ದಕ್ಕಿತು. ಮೊನ್ನೆ ಮೊನ್ನೆಯಷ್ಟೇ ಆರ್ಟ್ ಆಫ್ ಲಿವಿಂಗ್‌ನಲ್ಲಿ ನಡೀತಲ್ಲ ಶೂಟೌಟ್! ಅದು ರವಿಶಂಕರ್‌ಗೆ ಇನ್ನಷ್ಟು ಪ್ರಚಾರ ಕೊಟ್ಟಿತು. ಆದರೆ, ಅಲ್ಲೆಲ್ಲೋ ಮಳೆಯಾದರೆ ಇಲ್ಲೆಲ್ಲೋ ನೆಗಡಿ ಶುರುವಾದಂತೆ, ಶೂಟೌಟ್ ಪ್ರಕರಣಕ್ಕೂ, ತಮ್ಮ ಧ್ಯಾನಪೀಠಕ್ಕೂ ಯಾವುದೇ ಸಂಬಂಧ ಇಲ್ಲ ಅನ್ನೋ ಸ್ಪಷ್ಟನೆ ನಿತ್ಯಾನಂದನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡಿತು.

ಇರಲಿ, ಈ ವಿಷಯವೇ ಬೇರೆ. ಹಾಗಂತ ನಿತ್ಯಾನಂದನ ಸೆಕ್ಸ್ ಸ್ಕ್ಯಾಂಡಲ್‌ಗೂ ರವಿಶಂಕರ ಗುರೂಜಿ ಅವರಿಗೂ ಸಂಬಂಧ ಇದೆ ಅಂತ ಅರ್ಥವಲ್ಲ. ಅದಕ್ಕೆ ಯಾವುದೇ ಆಧಾರವೂ ಇಲ್ಲ. ಮೇಲ್ನೋಟಕ್ಕೆ ಗೋಚರಿಸುವುದು ಮಾತ್ರ ಎರಡೂ ಆಶ್ರಮಗಳ ನಡುವಿನ ಸವತಿ ಮತ್ಸರ ಮಾತ್ರ.

ಅಷ್ಟಕ್ಕೂ ಆರ್ಟ್ ಆಫ್ ಲಿವಿಂಗ್‌ಗೂ ನಿತ್ಯಾನಂದನ ಸೆಕ್ಸ್ ಸ್ಕ್ಯಾಂಡಲ್‌ಗೂ ಸಂಬಂಧ ಕಲ್ಪಿಸಲು ಪುರಾವೆ ಇಲ್ಲವೆಂದ ಮೇಲೆ, ಸ್ಪಷ್ಟನೆ ನೀಡಿದ ಹಕೀಕತ್ತು ಏನೂ ಅನ್ನೋದನ್ನ ಸ್ವತಃ ನಿತ್ಯಾನಂದನೇ ಹೇಳಬೇಕು. ಶೂಟೌಟ್ ಪ್ರಕರಣದಲ್ಲಿ ತನ್ನದೇನೂ ತಪ್ಪಿಲ್ಲ ಅಂತ ಹೇಳಿದ್ದಾನೆಯೇ ವಿನಃ ಸತ್ಯ ಏನು ಅನ್ನೋದನ್ನ ಆತ ಈವರೆಗೆ ಬಾಯಿಬಿಟ್ಟಿಲ್ಲ.

ಹಾಗೆ ನೋಡಿದ್ರೆ, ನಿತ್ಯಾನಂದ, ಸ್ತ್ರೀಯ ಸಂಗದಂಥ ಗಂಡಿನ ಕೆಲಸ ಮಾಡಲು ಸಾಧ್ಯವೇ ಇಲ್ಲ ಅನ್ನೋ ಮಾತಿದೆ. ನಿತ್ಯಾನಂದನ ಹಾವಭಾವ ಮತ್ತು ವರ್ತನೆ ನೋಡಿದ್ರೆ ಈ ವಿಷಯ ಸ್ಪಷ್ಟವಾಗುತ್ತೆ ಅಂತ ಹೇಳೋರು ಇದ್ದಾರೆ. ಆದ್ರೆ, ನಿತ್ಯಾನಂದ ಸ್ತ್ರೀಸಂಗ ಮಾಡಿಯೇ ಇಲ್ಲ ಅಂತ ಹೇಳೋಕ್ಕೂ ಆಗಲ್ಲ. ‘ತನ್ನಿಚ್ಚೆಯಂತೆ ಅವನ ಜತೆ ಇದ್ದೆ ಅಂತ ಅವರೊಂದಿಗಿದ್ದ ಚಿತ್ರನಟಿಯೇ ಬಹಿರಂಗ ಹೇಳಿಕೆ ನೀಡಿದ್ದಾಳೆ.

ಒಂದು ವೇಳೆ, ನಿತ್ಯಾನಂದ ಅಂತಹ ಕೆಲಸ ಮಾಡಿದ್ದ ಅಂತ ಇಟ್ಕೊಳ್ಳೋಣ. ‘ಅದರಲ್ಲೇನು ತಪ್ಪು? ಇಬ್ಬರು ವಯಸ್ಕರ ನಡುವೆ ಪರಸ್ಪರ ಒಪ್ಪಿಗೆಯಿಂದ ನಡೆಯಬಹುದಾದ ಲೈಂಗಿಕ ಕ್ರಿಯೆಗೆ ಕಾನೂನಿನ ಒಪ್ಪಿಗೆಯೇ ಇದೆ. ಅದಕ್ಕೆ ಶಿಕ್ಷೆಯಿಲ್ಲ ಅನ್ನೋರ ಸಂಖ್ಯೆ ಕೂಡ ಕಡಿಮೆ ಏನಿಲ್ಲ.

ಇದೇನೇ ಆಗಲಿ, ನಿತ್ಯಾನಂದ ಸೆಕ್ಸ್ ಸ್ಕ್ಯಾಂಡಲ್‌ನಲ್ಲಿ ಸಿಲುಕಿಕೊಂಡ. ತಲೆಮರೆಸಿಕೊಂಡ. ಕೊನೆಗೆ ಜೈಲಲ್ಲಿ ಕಂಬಿ ಎಣಿಸೋ ಸ್ಥಿತಿ ತಂದುಕೊಂಡ. ಈ ಸ್ಕ್ಯಾಂಡಲ್ ಹಿಂದಿನ ಕಾರಣ ಮತ್ತು ಮರ್ಮ ಈಗಲೂ ನಿಗೂಢ.

ಸತ್ಯ ಹೇಳ್ಬೇಕಾದ ನಿತ್ಯಾನಂದ ಜೈಲು ಸೇರಿಕೊಂಡ. ಆದ್ರೂ ತನ್ನ ಸೆಕ್ಸ್ ಸ್ಕ್ಯಾಂಡಲ್ ಬಗ್ಗೆ ಇದ್ದದ್ದು ಇದ್ದಹಾಗೆ ಹೇಳೋ ಉಸಾಬರಿಗೆ ಹೋಗ್ಲಿಲ್ಲ. ಜೈಲಲ್ಲಿದ್ದರೂ ನಿರುಮ್ಮಳನಾಗಿದ್ದ. ಅಲ್ಲೇ ಜಪತಪ ಮಾಡ್ತಿದ್ನಂತೆ ಮಹಾರಾಯ. ಆದರೆ, ಕಂಪ್ಲೆಂಟೇ ಇಲ್ಲದ ನಿತ್ಯಾನಂದನಿಗೆ ಕಾನೂನು ಏನು ಮಾಡುತ್ತೆ ಅಂತ ಇಲ್ಲೊಂದು ಆರ್ಗ್ಯುಮೆಂಟ್ ಇದೆಯಲ್ಲಾ? ಈ ಕುರಿತ ಒಂದಷ್ಟು ಕಣ್ಣಾಯಿಸೋಣ..

ಹಾಗೆ ನೋಡಿದ್ರೆ.. ನಿತ್ಯಾನಂದ ಅವತಾರ ಪುರುಷನೇನಲ್ಲ. ಆತ ಹುಟ್ಟಿದ್ದು, ಬೆಳೆದಿದ್ದು ಎಲ್ಲವೂ ಸಾಮಾನ್ಯ ಕುಟುಂಬವೊಂದರಲ್ಲಿ. ಹೀಗೆ ಬೆಳೆದ ನಿತ್ಯಾನಂದ ಭಕ್ತರ ಪಾಲಿಗೆ ಪರಮಹಂಸನಾದ. ಇವನಿಗೆ ಈ ಬಿರುದು ಕೊಟ್ಟ ಪುಣ್ಯಾತ್ಮರ‍್ಯಾರು ಅನ್ನೋದು ಯಾರಿಗೂ ಗೊತ್ತಿಲ್ಲ. ಬಹುಶಃ ನಿತ್ಯಾನಂದನಿಗೆ ನಿತ್ಯಾನಂದನೇ ಸಾಟಿ ಇರಬೇಕು ಅನ್ಸುತ್ತೆ. ಏನೇ ಇರಲಿ, ಇಷ್ಟು ದಿನ ಜೈಲು ಹಕ್ಕಿಯಾಗಿದ್ದ ನಿತ್ಯಾನಂದ ಈಗ ಮುಕ್ತ ಹಕ್ಕಿ. ರಿಲೀಸ್ ನಂತರ ಯಜ್ಞ-ಯಾಗ ಶುರು ಹಚ್ಕೊಂಡಿದ್ದಾನೆ. ಇಂಥ ನಿತ್ಯಾನಂದ ಕಾನೂನಿಗೆ ತಲೆ ಬಾಗ್ತಾನೋ ಅಥವಾ ಸೆಡ್ಡು ಹೊಡೀತಾನೋ ?

ಅದೇನ ಇದ್ರು ಈಗ ಕಂಬಿ ಹಿಂದೆ ಕಾವಿಧಾರಿ? ಯಸ್. ಅನುಮಾನವೇ ಬೇಡ. ಈತನೇ ನಿತ್ಯಾನಂದ ಸ್ವಾಮಿ. ಕರ್ಮ ಅಂದ್ರೆ ಇದೇ ಅಲ್ವಾ? ಧರ್ಮ-ಕರ್ಮ ಅನ್ಕೊಂಡು ಕಂಡಕಂಡವರಿಗೆ ಬೋಧನೆ ಮಾಡ್ತಿದ್ದ ಸ್ವಾಮಿಗೆ ಬಂದ ಸ್ಥಿತಿ ನೋಡಿ. ಇದೆಲ್ಲಾ ಯಾಕ್ ಬೇಕಿತ್ತು ಹೇಳಿ? ಆಯಿತು, ಆಗಿದ್ದೆಲ್ಲಾ ಆಗಿಹೊಯ್ತು. ನಡೆಯಬಾರದ್ದೆಲ್ಲಾ ನಡೆದು ಹೋಯ್ತು. ನಿತ್ಯಾನಂದನಿಗೆ ಈಗ ಬಿಡುಗಡೆಯ ಭಾಗ್ಯ.

ಇಷ್ಟೆಲ್ಲಾ ಆದ್ಮೇಲೂ ನಿತ್ಯಾನಂದನಿಗೆ ಅನುಯಾಯಿಗಳ ಕೊರತೆಯೇನಿಲ್ಲ. ಆಗಿದ್ದು ಆಗ್ಹೊಯ್ತು. ಕಂ ಕಮ್, ವೆಲ್‌ಕಂ ಅಂತಿದ್ದಾರೆ ಅನುಯಾಯಿಗಳು...

ಇದಿಷ್ಟೆ ಅಲ್ಲ. ಪ್ರಮೋದ್ ಮುತಾಲಿಕ್ ಕೂಡ ನಿತ್ಯಾನಂದನಿಗೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಹಾಗೆ ಸರ್ಟಿಫಿಕೇಟ್ ಕೊಡಿ ಅಂತ ಇವ್ರಿಗೆ ಅದ್ಯಾರು ಕೇಳಿದ್ರೂ ಗೊತ್ತಿಲ್ಲ. ಇವರ ಪ್ರಕಾರ. ನಿತ್ಯಾನಂದನ ಕರ್ಮಕಾಂಡವೆಲ್ಲಾ ಕ್ರಿಶ್ಚಿಯನ್ ಮಿಷನರಿಗಳ ಪಿತೂರಿ.

ಪ್ರಮೋದ್ ಮುತಾಲಿಕ್ ಅವರು ನಿತ್ಯಾನಂದನ್ನ ಸಮರ್ಥಿಸಲಿ ಬಿಡಲಿ. ಆದ್ರೆ, ಕೋರ್ಟ್ ಕಟಕಟೆಯಲ್ಲಿ ಈತನ ವಿರುದ್ಧ ಇರೋ ಕೇಸ್ ಅದೇನಾಗುತ್ತೆ ಅಂತ ನೋಡೋಣ ಬನ್ನಿ.

ಅಸಲಿಗೆ, ನಿತ್ಯಾನಂದ ಜೈಲಿನಿಂದ ಬಿಡುಗಡೆಯಾಗಿ ಬಂದಿರೋದು ಹೇಗೆ ಗೊತ್ತಾ? ನಿತ್ಯಾನಂದ ತನಗೆ ಅತ್ಯಾಚಾರ ಮಾಡಿದ ಅಂತ ಯಾರೊಬ್ರು ವೈಯಕ್ತಿಕವಾಗಿ ದೂರು ಕೊಟ್ಟಿಲ್ಲ. ಮೀಡಿಯಾದವ್ರು ಪ್ರಕರಣವನ್ನು ವೈಭವೀಕರಿಸಿವೆ. ಇದರಿಂದ ಸ್ವಾಮೀಜಿಯ ವ್ಯಕ್ತಿತ್ವಕ್ಕೆ ಮತ್ತು ಅವರ ಅನುಯಾಯಿಗಳ ನಂಬಿಕೆಗೆ ಧಕ್ಕೆ ಉಂಟಾಗಿದೆ ಅನ್ನೋ ಆರ್ಗ್ಯುಮೆಂಟ್ ಇದೆ. ಹೀಗಾಗಿ, ಬೇಲ್ ಸಿಕ್ತು.

ಅಷ್ಟೇ ಅಲ್ಲ. ಪರಸ್ಪರ ಒಪ್ಪಿಗೆಯೊಂದಿಗೆ ಇಬ್ಬರು ವಯಸ್ಕರು ಶಯನ ಗೃಹದಲ್ಲಿ ಏಕಾಂತದಲ್ಲಿರುವಾಗ ಅದನ್ನು ಗುಪ್ತವಾಗಿ ಚಿತ್ರೀಕರಣ ಮಾಡಿದ್ದು ಮತ್ತು ಅದನ್ನು ಪ್ರಸಾರ ಮಾಡಿದ್ದು ಬಹುದೊಡ್ಡ ತಪ್ಪು. ಅಂಥವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ, ಇಲ್ಲಿ ಆಗಿದ್ದು ಉಲ್ಟಾ ಅನ್ನೋ ವಾದವನ್ನು ವಕೀಲರು ಹರಿಯಬಿಟ್ಟಿದ್ದಾರೆ.

ಇಷ್ಟಾದ ಮೇಲೆ ಕೋರ್ಟಲ್ಲಿ ಕೇಸು ತಿರುಗು ಬಾಣ ಆಗೋ ಹಾಗಿದೆ ಅನ್ನೋ ಅಭಿಪ್ರಾಯ ಯಾರಿಗಾದ್ರೂ ಬಂದ್ರೆ, ಅದ್ರಲ್ಲಿ ಅಚ್ಚರಿ ಪಡುವುದೇನಿಲ್ಲ. ಅಷ್ಟಕ್ಕೂ ಈ ಪ್ರಕರಣದಲ್ಲಿ ಸಿಓಡಿ ಪೊಲೀಸ್ರು ಕಡಿದು ಕಟ್ಟೆ ಹಾಕಿದ್ದೇನು ಅನ್ನೋ ಪ್ರಶ್ನೆ ಕೂಡ ಸಹಜ. ಆದ್ರೆ, ಒಂದಂತು ನಿಜ. ಕೋರ್ಟ್ ಕಟಕಟೆಯಲ್ಲಿ, ತಾಂತ್ರಿಕ ನೆಲೆಯಲ್ಲಿ ನಿತ್ಯಾನಂದನ ವಕೀಲರ ವಾದ ಏನೇ ಇರಬಹುದು. ಆದ್ರೆ, ನಿತ್ಯಾನಂದ ಕಾವಿ ಧರಿಸಿ, ಸಮಾಜವನ್ನು ನಂಬಿಸಿದವ. ಆದ್ದರಿಂದ, ನೈತಿಕವಾಗಿ ತಾನು ಮಾಡಿದ್ದೆಷ್ಟು ಸರಿ ಅಂತ ಉತ್ತರಿಸಬೇಕಾದ್ದು ಧರ್ಮ. ಆದ್ರೆ, ಅದ್ಯಾವ ಗೋಜಿಗೂ ಹೋಗದ ನಿತ್ಯಾನಂದ, ಜೈಲಿನಿಂದ ಹೊರಬಂದಾಗಿನಿಂದ ಪಂಚಾಗ್ನಿ ತಪಸ್ಸಿನ ಮೊರೆ ಹೊಕ್ಕಿದ್ದಾನೆ. ಲೋಕಕಲ್ಯಾಣ ಮತ್ತು ವಿಶ್ವಶಾಂತಿ ಇದರ ಹಿಂದಿನ ಉದ್ದೇಶವಂತೆ. ಉದ್ದೇಶ ಏನೇ ಇರಬಹುದು, ನಿತ್ಯಾನಂದ ಅಥವಾ ಬೇರೆ ಯಾರೇ ಇರಬಹುದು ಸಮಾಜವನ್ನು ಮರುಳು ಮಾಡಬಾರದು ಅಲ್ವಾ ?

ಹಾಗೆ ನೋಡಿದ್ರೆ.. ಧರ್ಮದ ಹೆಸರಲ್ಲಿ ನಡೆಯೋ ಅನಾಹುತಗಳಿಗೆ ಕೊನೆ ಎಂಬುದಿಲ್ಲ. ಲೀಗಲ್ ಬ್ಯಾಟಲ್‌ನಲ್ಲಿ ನಿತ್ಯಾನಂದ ಗೆಲ್ಬಹುದು ಅಥವಾ ಸೋಲ್ಬಹುದು. ಆದ್ರೆ, ಎಲ್ಲದಕ್ಕೂ ನೈತಿಕತೆ ಮುಖ್ಯ. ಇದು ಕೇವಲ ನಿತ್ಯಾನಂದನ ವಿಷಯ ಮಾತ್ರ ಅಲ್ಲ. ಪರರಲ್ಲಿ ತಪ್ಪು ಹುಡುಕುವ ನಾವು, ಅದಕ್ಕೂ ಮುನ್ನ ಸ್ವಂತ ನೈತಿಕತೆ ಕಾಪಾಡಿಕೊಳ್ಳುವುದು ಮುಖ್ಯ ಅಂತ ತಾನೆ ?

- ಅಲೀಮ್

Wednesday, 16 June 2010

ಕಷ್ಟದಲ್ಲಿ ಕೃಷ್ಣಭಕ್ತರು

ಇಸ್ಕಾನ್ ಮತ್ತೆ ಸುದ್ದಿಯಲ್ಲಿದೆ. ಇಸ್ಕಾನ್‌ಗೂ ವಿವಾದಗಳಿಗೂ ಅದೇನೋ ಬಿಡಲಾರದ ನಂಟು. ಇಹಕ್ಕಿಂತ ’ಪರ’ಲೋಕಕ್ಕೆ ಹೆಚ್ಚಿನ ಒತ್ತು ನೀಡುತ್ತದೆ ಇಸ್ಕಾನ್. ಇಂತಹ ಈ ಇಸ್ಕಾನ್‌ಗೆ ಈಗ ’ಇಹ’ದ್ದೇ ದೊಡ್ಡ ತಲೆನೋವು. ಪದೇ ಪದೇ ವಿವಾದಗಳಿಗೆ ಬಲಿಯಾಗುವುದು ಇಸ್ಕಾನ್‌ಗೆ ರೂಢಿಯಾದಂತಿದೆ. ಅಕ್ಷಯ ಪಾತ್ರೆಯನ್ನು ಇಸ್ಕಾನ್ ಭಿಕ್ಷಾ ಪಾತ್ರೆ ಮಾಡಿಕೊಂಡಿದೆ. ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿದೆ ಎಂಬುದು ಅದರ ವಿರುದ್ಧ ಪದೆ ಪದೆ ಕೇಳಿಬಂದಿರುವ ಆರೋಪ. ಈ ವಿಷಯ ಎತ್ತಿಕೊಂಡು ಹರಿಹಾಯುತ್ತಿರುವ ಕಾಂಗ್ರೆಸ್ ಧುರೀಣ ಡಿ.ಕೆ. ಶಿವಕುಮಾರ್ ವಿರುದ್ಧ ಇಸ್ಕಾನ್ ಕೆರಳಿದೆ. ಹಾಗಾದ್ರೆ, ತಪ್ಪು ಯಾರದು? ಇಡೀ ಪ್ರಕರಣದ ಹಕೀಕತ್ತು ಏನು?

ಇಸ್ಕಾನ್‌ನ ಹಿಸ್ಟರಿಯೇ ಒಂದು ದೊಡ್ಡ ಮಿಸ್ಟರಿ. ಇಹಲೋಕಕ್ಕಿಂತ ಪರಲೋಕಕ್ಕೆ ಒತ್ತು ಕೊಡ್ತದೆ ಇಸ್ಕಾನ್ ಚಿಂತನೆ. ಹೀಗಿದ್ರೂ ಆಗಿಂದಾಗ್ಗೆ ವಿವಾದದ ಸುಳಿಯಲ್ಲಿ ಸಿಲುಕುತ್ತದೆ ! ಮೋಕ್ಷದ ಮಾತಾಡುವ ಸಂಸ್ಥೆಯೊಂದು ಪದೆ ಪದೆ ವಿವಾದಗಳಿಗೆ ಸಿಲುಕ್ತಿದೆ ಅಂದ್ರೆ ಅದೇನೂ ಸಣ್ಣ ವಿಷಯವಲ್ಲ. ಏಕೆಂದ್ರೆ, ಧಾರ್ಮಿಕ ಸಂಸ್ಥೆಯಾದ ಇಸ್ಕಾನ್ ಅದ್ಯಾವುದೋ ಕಾಂಜಿಪಿಂಜಿ ಸಂಸ್ಥೆಯೇನಲ್ಲ. ಇಡೀ ಜಗತ್ತಿನಾದ್ಯಂತ ಹರಡಿಕೊಂಡಿರುವ ಮಲ್ಟಿ ನ್ಯಾಶನಲ್ ಧಾರ್ಮಿಕ ಸಂಸ್ಥೆ ಅದು.

ಯಸ್. ಇಸ್ಕಾನ್ ಅಂದ್ರೆ ಇಂಗ್ಲಿಷಿನಲ್ಲಿ ದಿ ಇಂಟರ್ ನ್ಯಾಷ್‌ನಲ್ ಸೊಸೈಟಿ ಪಾರ್ ಕೃಷ್ಣ ಕಾನ್ಸಿಯಸ್‌ನೆಸ್. ಅಂದ್ರೆ ಕೃಷ್ಣ ಪ್ರಜ್ಞೆಯ ಅಂತರ್‌ರಾಷ್ಟ್ರೀಯ ಸಂಸ್ಥೆ ಅನ್ನೋದು ಇದರ ಪೂರ್ಣ ನಾಮಧ್ಯೇಯ. ಇಂತಹ ಈ ಸಂಸ್ಥೆಯ ಸಂಸ್ಥಾಪಕ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ.

ಇಂತಹ ಇಸ್ಕಾನ್ ಸಂಸ್ಥೆ ಆರಂಭವಾಗಿದ್ದು ೧೯೬೬ರಲ್ಲಿ. ಈ ಸಂಸ್ಥೆ ಹುಟ್ಟಿದ್ದು ಭಾರತದಲ್ಲಲ್ಲ, ದೂರದ ನ್ಯೂಯಾರ್ಕ್‌ನಲ್ಲಿ. ವಿದೇಶಿ ನೆಲದಲ್ಲಿ ಹರೇಕೃಷ್ಣ ಚಳವಳಿ ಹರಡೋದು ಇದರ ಮುಖ್ಯ ಧ್ಯೇಯ..

ಇಸ್ಕಾನ್ ವೈಷ್ಣವ ಪಂಥದ ಸಂಸ್ಥೆ. ಭಗವದ್ಗೀತೆ, ಶ್ರೀಮದ್ ಭಾಗವತಂ ಮತ್ತಿತರ ಧಾರ್ಮಿಕ ಗ್ರಂಥಗಳು ಇಸ್ಕಾನ್‌ನ ಹರೇ ಕೃಷ್ಣ ಚಳವಳಿಯ ಮೂಲ ತಳಹದಿಯಂತೆ. ಯಾವುದೇ ಪಂಥಕ್ಕೆ ಸೇರದ ಇಸ್ಕಾನ್, ತನ್ನನ್ನು ತಾನು ಗುರುತಿಸಿಕೊಂಡಿರುವುದು ಭಕ್ತಿಪರಂಪರೆಯ ಮೂಲಕ. ಇದರ ಭಕ್ತರು ವಿಚಾರ ಮತ್ತು ಕ್ರಿಯೆಯ ಮೂಲಕ ಭಗವಾನ್ ಕೃಷ್ಣನನ್ನು ಆರಾಧಿಸ್ತಾರೆ. ಜಗತ್ತಿನಾದ್ಯಂತ ನಾನೂರಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿರುವ ಇಸ್ಕಾನ್ ೬೦ ಕೃಷಿಫಾರಂಗಳು, ೫೦ ಶಾಲೆಗಳು ಹಾಗೂ ೯೦ಕ್ಕೂ ಹೆಚ್ಚು ಸಸ್ಯಹಾರಿ ರೆಸ್ಟೋರೆಂಟ್‌ಗಳನ್ನು ಹೊಂದಿದೆ.

ಇಸ್ಕಾನ್ ಬಗ್ಗೆ ತಿಳ್ಕೊಂಡ್ರಲ್ವಾ. ಇಂತಹ ಇಸ್ಕಾನ್ ಇವತ್ತು ದೇಶ-ವಿದೇಶಗಳಲ್ಲಿ ದೊಡ್ಡದಾಗಿ ಬೆಳೆದು ನಿಂತಿದೆ. ಕೋಟ್ಯಂತರ ರೂಪಾಯಿಗಳ ವಹಿವಾಟು ಮತ್ತು ಆಸ್ತಿಪಾಸ್ತಿ ಇಸ್ಕಾನ್ ಹೆಸರಲ್ಲಿದೆ. ಜನರ ಧಾರ್ಮಿಕ ಭಾವನೆಯನ್ನೇ ಬಂಡವಾಳ ಮಾಡಿಕೊಂಡು, ಅದನ್ನೊಂದು ಕಾರ್ಪೋರೇಟ್ ಬ್ಯುಸಿನೆಸ್ ಸೆಂಟರ್‌ನ್ನಾಗಿ ಮಾರ್ಪಡಿಸಲಾಗಿದೆ ಎಂಬ ಮಾತೂ ಇಸ್ಕಾನ್ ಬಗ್ಗೆ ಇದೆ. ನೀವು ಯಾವುದೇ ಇಸ್ಕಾನ್ ಕೇಂದ್ರಕ್ಕೆ ಹೋದ್ರೂ, ಈ ಮಾತು ನಿಮಗೆ ಸ್ಪಷ್ಟವಾಗಿ ಅರ್ಥ ಆಗುತ್ತೆ.

ಇದೆಲ್ಲದರ ನಡುವೆ ಹೇಳ್ಲೆಬೇಕಾದ ಮಾತೊಂದಿದೆ. ಅದೇನೆಂದೆ,. ಆಗ್ಲೆ ಹೇಳಿದ್ವಲ್ಲಾ ಇಸ್ಕಾನ್ ಸಂಸ್ಥೆ ಸಂಸ್ಥಾಪಕ ಭಕ್ತಿವೇದಾಂತ ಸ್ವಾಮಿ ಪ್ರಭುಪಾದ. ಇವ್ರು ೧೯೭೦ರಲ್ಲಿ ಮರಣ ಹೊಂದ್ತಾರೆ. ಹೀಗೆ ಇವ್ರು ಮರಣ ಹೊಂದಿದ ಮೇಲೆ ಇವ್ರು ಸ್ಥಾಪಿಸಿದ ಇಸ್ಕಾನ್ ಸಂಸ್ಥೆಗೆ ವಾರಸುದಾರರು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತೆ. ಯಾಕಪ್ಪಾ ಇಷ್ಟೆಲ್ಲ ರಗಳೇ ಅಂದ್ರೆ, ಸಂಸ್ಥೆಗೆ ಹರಿದು ಬರುತ್ತಿದ್ದ ಹಣದ ಹೊಳೆ ಉತ್ರ ಹೇಳುತ್ತೆ. ಅದು ಸರಿನೇ ಬಿಡಿ. ದುಡ್ಡು ಇರೋ ಕಡೆ ವಿವಾದ ಸೃಷ್ಟಿಯಾಗ್ದೆ ಇರುತ್ತಾ? ಸತ್ತು ಹೋದ ಪ್ರಭುಪಾದರು, ಸಂಸ್ಥೆಗೆ ಯಾರನ್ನು ಟ್ರಸ್ಟಿಯಾಗಿ ನೇಮಿಸಿರುವುದಿಲ್ಲ. ಬದಲಿಗೆ ೨೫ ಮಂದಿಯ ಕಾರ‍್ಯಕಾರಿ ಸಮಿತಿ ಇರುತ್ತದೆ. ಆದರೆ, ಪ್ರಭುಪಾದರ ಮರಣಾನಂತರ, ಈ ಸಮಿತಿಯ ಒಳಗೂ ರಾಜಕೀಯ ಸೇರ್ಕೊಂಡ್ತು. ಇಸ್ಕಾನ್‌ನ ವಿವಿಧ ಶಾಖೆಗಳ ಆಡಳಿತದ ಬಗ್ಗೆ ಸಮಿತಿ ಸದಸ್ಯರಲ್ಲೆ ಭಿನ್ನಾಭಿಪ್ರಾಯಗಳು ಕಾಣಿಸ್ಕೊಂಡ್ವು. ಮುಂಬೈ ಇಸ್ಕಾನ್ ಮತ್ತು ಬೆಂಗಳೂರು ಇಸ್ಕಾನ್ ವಿವಾದ ರಾಜ್ಯ ಹೈಕೋರ್ಟ್ ಮೆಟ್ಟಲೇರಿದ್ದೇ ಇದಕ್ಕೆ ಸಾಕ್ಷಿ.

ಇಸ್ಕಾನ್‌ನಲ್ಲಿ ಇಂತಹ ವ್ಯಾಜ್ಯಗಳು ಒಂದೆರಡಲ್ಲ. ಈಗ ಬೆಂಗಳೂರಿನ ಇಸ್ಕಾನ್ ವಿಷಯಕ್ಕೆ ಬರೋಣ. ಈ ಸಂಸ್ಥೆ ಶುರುವಾಗಿದ್ದು ಪ್ರತ್ಯೇಕ ಸಂಸ್ಥೆಯಾಗಿ. ಅಂದ್ರೆ, ಇದಕ್ಕೂ, ಪ್ರಭುಪಾದರ ಇಸ್ಕಾನ್‌ಗಳು ನೇರ ಸಂಬಂಧ ಇಲ್ಲ. ‘ಪ್ರತಿಯೊಂದು ದೇವಸ್ಥಾನಗಳನ್ನು ಪ್ರತ್ಯೇಕವಾಗಿಯೇ ನೋಂದಾಯಿಸಬೇಕು. ಒಂದು ದೇವಸ್ಥಾನ ಇನ್ನೊಂದು ದೇವಸ್ಥಾನವನ್ನು ಅವಲಂಬಿಸಬಾರದು. ಈ ಎಲ್ಲಾ ದೇವಸ್ಥಾನಗಳು ಸ್ವತಂತ್ರವಾಗೇ ಕಾರ್ಯ ನಿರ್ವಹಿಸಬೇಕು ಹಾಗೂ ಆರ್ಥಿಕವಾಗಿಯೂ ಪ್ರಬಲವಾಗಬೇಕು’ ಎಂಬುದು ಇಸ್ಕಾನ್ ಸ್ಥಾಪಕ ಪ್ರಭುಪಾದರ ಆಶಯವಾಗಿತ್ತಂತೆ. ಹಾಗಾಗಿ ಎಲ್ಲಾ ಇಸ್ಕಾನ್‌ಗಳೂ ಸ್ವತಂತ್ರ ದೇವಾಲಯಗಳಾದ್ದರಿಂದ ನಿಜವಾದ ಇಸ್ಕಾನ್ ಯಾವುದು ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ್ಲವಂತೆ.. !

ಸರಿ ಹೊಯ್ತು ಬಿಡಿ. ಮುಂಬೈ ಇಸ್ಕಾನ್ ಒರಿಜಿನಲ್ಲೋ.. ನ್ಯೂಯಾರ್ಕ್ ಇಸ್ಕಾನ್ ಒರಿಜಿನಲ್ಲೋ ಅಥವಾ ಬೆಂಗಳೂರು ಇಸ್ಕಾನ್ ದೊಡ್ದೋ ಅಂತ ಕಟ್ಕೊಂಡು ನಮ್ಗೇನಾಗಬೇಕು ಹೇಳಿ ? ಈ ಇಸ್ಕಾನ್‌ಗಳು ಸ್ವತಂತ್ರವಾಗಿ ಕೆಲಸ ಮಾಡ್ತವೋ.. ಅಥವಾ ಒಟ್ಟೊಟ್ಟಿಗೇ ಕೆಲಸ ಮಾಡ್ಬೇಕೋ ಅನ್ನೋದು ಆಯಾ ಆಡಳಿತ ಮಂಡಳಿಗಳಿಗೆ ಸೇರಿದ ವಿಷಯ ಬಿಡಿ. ಮಜಾ ಅಂದ್ರೆ. ಈ ವಿಷಯ ರಾಜ್ಯ ಹೈಕೋರ್ಟ್ ಮೆಟ್ಟಲೇರಿತ್ತು. ಇಸ್ಕಾನ್‌ಗೆ ಸೇರಿದವರೆನ್ನಲಾದ ಕೆಲವರು, ವಿಚಾರಣೆ ನಡೆಸುತ್ತಿದ್ದ ಹೈಕೋರ್ಟ್ ನ್ಯಾಯಾಧೀಶರಿಗೆ ಅನಾಮಧೇಯ ಪತ್ರ ಬರೆದು ಬ್ಲ್ಯಾಕ್‌ಮೇಲ್‌ಗೆ ಯತ್ನಿಸಿದ ಆರೋಪವೂ ಕೇಳಿ ಬಂದಿತ್ತು. ಕೊನೆಗೆ, ಬೆಂಗಳೂರು ಇಸ್ಕಾನ್ ಕೇಸ್ ಗೆದ್ದಿತು. ಇದೆಲ್ಲ ಈಗ ಹಳೆಯ ವಿಚಾರ.

ಧರ್ಮ ಜಾಗೃತಿಗೇ ಅಂತ ಇಂಟರ್‌ನ್ಯಾಷ್‌ನಲ್ ಲೆವೆಲ್‌ನಲ್ಲಿ ಹುಟ್ಟಿದ ಸಂಸ್ಥೆ ಇಸ್ಕಾನ್. ಆದ್ರೆ, ಆ ಲೆವೆಲ್‌ನಿಂದ ಹಿಡಿದು ಲೋಕಲ್ ಲೆವಲ್‌ವರ‍್ಗೆ ಬರೀ ವಿವಾದಗಳಿಗೇ ಸಿಲುಕೊಂಡಿದ್ದು ಇದರ ಸ್ಪೆಷಾಲಿಟಿ. ಈಗ ನೀವು ನೋಡಿದ್ದು, ಕೇಳಿದ್ದು ಕೇವಲ ಸ್ಯಾಂಪಲ್ ಮಾತ್ರ. ಇಂತಹ ಹತ್ತು ಹಲವು ವಿವಾದಗಳು ಇಸ್ಕಾನ್ ಬೆನ್ನಿಗಂಟಿಕೊಂಡಿವೆ. ರಾಜ್ಯದ ಗಣ್ಯರೊಬ್ಬರ ಹೆಸರೂ ಇದ್ರಲ್ಲಿ ಕೇಳಿಬಂದಿದೆ.

ಆಗ್ಲೆ ಹೇಳಿದ ಹಾಗೆ ಇಸ್ಕಾನ್ ಒಂದು ಇಂಟರ್‌ನ್ಯಾಷ್‌ನಲ್ ಸಂಸ್ಥೆ. ಹೇಳಿ-ಕೇಳಿ ಇದು ಅಮೆರಿಕಾದಲ್ಲಿ ಜನ್ಮ ಪಡೆದದ್ದು. ಅಮೆರಿಕಾದಲ್ಲಿಯಾದ್ರೂ ಇದರ ಇತಿಹಾಸ ನೆಟ್ಟಗೆ ಇದೆಯಾ ಅಂತ ನೋಡಿದ್ರೆ, ಖಂಡಿತಾ ಇಲ್ಲ. ಅಮೆರಿಕಾದಲ್ಲಿ ಇಸ್ಕಾನ್ ಲೈಂಗಿಕ ಹಗರಣಕ್ಕೆ ಸಿಲುಕಿಕೊಂಡಿತ್ತು. ಸಂಸ್ಥೆಯ ವಿದ್ಯಾರ್ಥಿಗಳೇ ಇದಕ್ಕೆ ಬಲಿಯಾಗಿದ್ರು. ಅದಕ್ಕಾಗಿ ೪೨೦ ಕೋಟಿ ರೂಪಾಯಿಗಳ ದೊಡ್ಡ ಮೊತ್ತದ ದಂಡವನ್ನು ಇಸ್ಕಾನ್ ತೆತ್ತಿತ್ತು. ಅದನ್ನು ಬಿಡಿ. ಈಗ ಬೆಂಗಳೂರಿನಲ್ಲಿ ಅದು ಮಾಡಿಕೊಂಡಿರೋ ರಾಡಿ ನೋಡಿ..

ಅದು ೧೯೭೮ರ ಮೇ ತಿಂಗಳು.. ಕರ್ನಾಟಕ ಸೊಸೈಟಿ ರಿಜಿಸ್ಟ್ರೇಷನ್ ಆಕ್ಟ್‌ನಡಿ ಇಸ್ಕಾನ್ ನೊಂದಣಿಯಾಯ್ತು. ಅಷ್ಟರಲ್ಲಾಗ್ಲೆ, ಇಸ್ಕಾನ್ ಸಂಸ್ಥಾಪಕ ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಮರಣ ಹೊಂದಿದರು. ಅವರ ಇಚ್ಛೆಯಂತೆ ಇದನ್ನು ನೊಂದಾಯಿಸಲಾಗಿದ್ರಿಂದ ಇದೊಂದು ಸ್ವತಂತ್ರ ಸಂಸ್ಥೆ. ಹೀಗೆ ಬೆಂಗಳೂರಿನಲ್ಲಿ ಸಂಸ್ಥೆ ಶುರುವಾದ ಬೆನ್ನಲ್ಲೇ ವಿವಾದ ಹುಟ್ಟಿಕೊಂಡಿತು. ಇಸ್ಕಾನ್‌ನ ಮುಂಬಯಿ ಘಟಕ ಬೆಂಗಳೂರಿನ ಈ ಸಂಸ್ಥೆ ತನ್ನ ಸುಪರ್ದಿಗೆ ಬರಬೇಕು ಎಂದು ಪಟ್ಟು ಹಿಡಿಯಿತು. ವ್ಯಾಜ್ಯ ಕೋರ್ಟ್ ಮೆಟ್ಟಲೇರಿತು. ಅಂತಿಮವಾಗಿ ಬೆಂಗಳೂರು ಇಸ್ಕಾನ್ ಕೇಸ್ ಗೆದ್ದಿತು.

ಅದು ೧೯೯೭ ನೇ ಇಸವಿ.

ಇಸ್ಕಾನ್ ಸಂಸ್ಥಾಪಕ ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಅವರ ಜನ್ಮ ಜಯಂತಿ ಪ್ರಯುಕ್ತ ಬೆಂಗಳೂರಿನಲ್ಲಿ ಇಸ್ಕಾನ್ ದೇಗುಲವನ್ನು ಅನಾವರಣಗೊಳಿಸಲಾಯ್ತು. ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ೨೦೦ ಅಡಿ ಎತ್ತರದ ಕಲ್ಲು ಬಂಡೆಗಳಿಂದ ಕೂಡಿದ ಪುಟ್ಟದೊಂದು ಗುಡ್ಡದ ಮೇಲೆ ಅತ್ಯಂತ ಭವ್ಯವಾಗಿ ಈ ದೇಗುಲವನ್ನು ನಿರ್ಮಿಸಲಾಗಿದೆ. ಸುಮಾರು ಏಳು ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ದೇಗುಲ ಇವತ್ತು ಬೆಂಗಳೂರಿನ ಪ್ರಮುಖ ಟೂರಿಂಗ್ ಸ್ಪಾಟ್‌ಗಳಲ್ಲಿ ಒಂದು. ನಿತ್ಯ ಏನಿಲ್ಲವೆಂದರೂ ಸಾವಿರಾರು ಮಂದಿ ಈ ದೇಗುಲಕ್ಕೆ ಭೇಟಿ ನೀಡ್ತಾರೆ

ಇಂತಹ ಈ ದೇಗುಲದ ಆಡಳಿತ ಮಂಡಳಿ ಮತ್ತೆ ವಿವಾದಕ್ಕೆ ಸಿಲುಕಿಕೊಂಡಿತು. ಈ ವಿವಾದ ಇಸ್ಕಾನ್ ಒಡೆತನಕ್ಕೆ ಸಂಬಂಧಿಸಿದ್ದಲ್ಲ. ಬದಲಿಗೆ ಅದು ಹಮ್ಮಿಕೊಂಡಿರುವ ಕಾರ‍್ಯಚಟುವಟಿಗೆ ಮತ್ತು ಸಂಗ್ರಹಿಸುತ್ತಿರುವ ದೇಣಿಗೆಗೆ ಸಂಬಂಧಿಸಿದ್ದು. ಮೊದಲನೆಯದಾಗಿ ಆಧ್ಯಾತ್ಮ ಸಂಸ್ಥೆಯಾದ ಇಸ್ಕಾನ್ ವ್ಯಾಪಾರಿ ಸಂಸ್ಥೆಯಾಗಿ ಪರಿವರ್ತನೆಗೊಂಡಿದೆ. ಇದಕ್ಕೆ ಅದು ಸ್ಥಾಪಿಸಿರುವ ರೆಸ್ಟೋರೆಂಟ್‌ಗಳೇ ಸಾಕ್ಷಿ ಎಂಬ ಅಪಸ್ವರ ಕೇಳಿಬಂತು. ಇದನ್ನು ಅರಗಿಸಿಕೊಳ್ಳುವಷ್ಟರಲ್ಲಿ ಇಸ್ಕಾನ್ ಬೆನ್ನಿಗೇರಿದ್ದು ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುವ ಅಕ್ಷಯ ಪಾತ್ರೆ ಕಾರ‍್ಯಕ್ರಮ. ಮಕ್ಕಳಿಗೆ ಬಿಸಿಯೂಟ ಒದಗಿಸುವ ನೆಪದಲ್ಲಿ ಇಸ್ಕಾನ್ ಕೋಟ್ಯಂತರ ರೂಪಾಯಿ ದೇಣಿಗೆ ಸಂಗ್ರಹಿಸಿ ಅದನ್ನು ದುರುಪಯೋಗಪಡಿಸಿಕೊಂಡಿದೆಯಂತೆ.

ಇಸ್ಕಾನ್ ವ್ಯವಹಾರದಲ್ಲಿ ಡಿ.ಕೆ. ಶಿವಕುಮಾರ್ ಎಂಟ್ರಿಯೊಂದಿಗೆ ಆರೋಪಕ್ಕೆ ಮಹತ್ವ ಬಂದು ಬಿಟ್ಟಿತು. ಮಾತ್ರವಲ್ಲ, ರಾಜಕೀಯ ತಿರುವನ್ನು ಕೂಡ ಈ ಪ್ರಕರಣ ಪಡೆಯತೊಡಗಿತು.

ಡಿ.ಕೆ. ಶಿವಕುಮಾರ್ ಅವರ ಪ್ರಕಾರ, ಇಸ್ಕಾನ್ ಈಗ ಮಾಡುತ್ತಿರುವುದು ಶುದ್ಧ ಮಾನಗೇಡಿ ಕೆಲಸ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಈ ಸಂಸ್ಥೆ ತೊಡಗಿದೆ. ಈ ಸಂಸ್ಥೆಗೆ ಅಕ್ಷರ ದಾಸೋಹ ಯೋಜನೆ ಗುತ್ತಿಗೆ ನೀಡಿರುವುದು ಅಪವಿತ್ರ. ಸರ್ಕಾರಿ ಶಾಲೆ ಮಕ್ಕಳಿಗೆ ಬಿಸಿಯೂಟ ನೀಡುವ ಯೋಜನೆಯನ್ನು ಮುಂದಿಟ್ಟುಕೊಂಡು ಅಮೆರಿಕಾದಲ್ಲಿ ಕೋಟ್ಯಂತರ ರೂಪಾಯಿ ದೇಣಿಗೆಯನ್ನು ಇಸ್ಕಾನ್ ಸಂಗ್ರಹಿಸುತ್ತಿದೆಯಂತೆ. ಹೀಗೆ ಸಂಗ್ರಹವಾದ ಹಣವನ್ನು ರಿಯಲ್ ಎಸ್ಟೇಟ್ ಸೇರಿದಂತೆ ಇತರ ವ್ಯವಹಾರಗಳಲ್ಲಿ ತೊಡಗಿಸುತ್ತಿದೆಯಂತೆ.

ಅಷ್ಟಕ್ಕೂ, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಆರಂಭಿಸಿದ್ದು ಅಂದಿನ ಎಸ್.ಎಂ. ಕೃಷ್ಣ ಸರ್ಕಾರ. ಆವತ್ತು ಕೃಷ್ಣ ಸಂಪುಟದಲ್ಲಿ ಮಂತ್ರಿಯಾಗಿದ್ದ ಡಿ.ಕೆ. ಶಿವಕುಮಾರ್, ಇಸ್ಕಾನ್‌ನ ಅಕ್ಷಯಪಾತ್ರೆ ಯೋಜನೆಗೆ ತಮ್ಮ ಸಂಪೂರ್ಣ ಸಮ್ಮತಿ ಸೂಚಿಸಿದ್ದರು. ಆವತ್ತು ಸುಮ್ಮನಿದ್ದ ಶಿವಕುಮಾರ್, ಇವತ್ತು ಇಸ್ಕಾನ್ ವ್ಯವಹಾರದಲ್ಲಿ ಮೂಗು ತೂರಿಸುತ್ತಿರುವುದೇಕೆ ಅಂದ್ರೆ.. ಇಸ್ಕಾನ್ ಮಂದಿ ಅದನ್ನು ಸಮರ್ಥಿಸಿಕೊಳ್ತಾರೆ.

ಅಂದ್ರೆ, ಎರಡೂ ಕಡೆಯಿಂದ ಪ್ಯೂರ‍್ಲಿ ಇದೊಂದು ರಿಯಲ್ ಎಸ್ಟೇಟ್ ಇಂಟರೆಸ್ಟ್. ಲಾಭ-ನಷ್ಟದ ಲೆಕ್ಕಾಚಾರ. ಅದಕ್ಕಾಗಿಯೇ ಇಷ್ಟೆಲ್ಲಾ ರಂಪಾಟ. ಆದ್ರೆ.. ವಿಷಯ ಇಷ್ಕಕ್ಕೆ ಸೀಮಿತವಾಗಿಲ್ಲ.

ಯಾವುದೇ ಪ್ರಾಬ್ಲಂ ಅಥವಾ ವಿವಾದದ ಹಿಂದೆ ಕುರುಡು ಕಾಂಚಾಣದ ಮಹಿಮೆ ಇರುತ್ತಂತೆ. ಈ ಪ್ರಕರಣದಲ್ಲೂ ಕೂಡ ಅದು ಕೆಲಸ ಮಾಡಿದೆ. ಇವತ್ತು ಇಸ್ಕಾನ್ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಸಂಘರ್ಷಕ್ಕೆ ರಿಯಲ್ ಎಸ್ಟೇಟ್ ಇಂಟರೆಸ್ಟೇ ಮುಖ್ಯ ಕಾರಣವಂತೆ. ಈ ಸಂಘರ್ಷ ಎಲ್ಲಿವರ‍್ಗೆ ಹೋಗಿದೆ ಎಂದ್ರೆ... ಶಿವಕುಮಾರ್‌ರನ್ನು ಕೆಪಿಸಿಸಿ ಕಾರ‍್ಯಾಧ್ಯಕ್ಷ ಸ್ಥಾನದಿಂದ ಪಚಚ್ಯುತಿಗೊಳಿಸುವ ಮಟ್ಟದವರೆಗೆ.

ರಿಯಲ್ ಎಸ್ಟೇಟ್ ಅಂದ್ಮೇಲೆ ಕುರುಡು ಕಾಂಚಾಣ ಸದ್ದು ಮಾಡ್ದೆ ಇರುತ್ತಾ ? ಇಲ್ಲಾಗಿದ್ದು ಅದೇ. ಕನಕಪುರದ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವಾಗ ವ್ಯವಹಾರ ಕುದುರಲಿಲ್ಲವೋ.. ಅಲ್ಲಿಂದಾಚೆಗೆ ಇಸ್ಕಾನ್ ವಿರುದ್ಧ ಶಿವಕುಮಾರ್ ಕತ್ತಿ ಮಸೆಯತೊಡಗಿದರಂತೆ. ಹಾಗಿದ್ರೆ, ಇಸ್ಕಾನ್‌ಗೂ ರಿಯಲ್ ಎಸ್ಟೇಟ್ ಇಂಟರೆಸ್ಟ್ ಇದೆಯೇ ? ವಿದೇಶಗಳಲ್ಲಿ ಬಡಮಕ್ಕಳ ಫೋಟೋ ತೋರಿಸಿ ದುಡ್ಡು ಮಾಡ್ತಿರೋ ಅದರ ಕ್ರಮ ಸರಿಯೇ?

ಅಕ್ಷರ ದಾಸೋಹ. ಇದು ಆಗಿನ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಕಾರ‍್ಯಕ್ರಮಗಳಲ್ಲೊಂದು. ಆಗ ಮುಖ್ಯಮಂತ್ರಿ ಗಾದಿ ಮೇಲೆ ಕೂತಿದ್ದವರು ಈಗಿನ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ. ಅವರ ಸರ್ಕಾರ ಅಕ್ಷರ ದಾಸೋಹ ಕಾರ‍್ಯಕ್ರಮವನ್ನು ಖಾಸಗಿ ಸಹಭಾಗಿತ್ವದಲ್ಲಿ ನಡೆಸಲು ಯೋಜನೆ ರೂಪಿಸಿತು. ಅದರ ಪರಿಣಾಮವೇ ಇಸ್ಕಾನ್ ಸಂಸ್ಥೆಯ ಅಕ್ಷಯಪಾತ್ರೆ ಯೋಜನೆ. ಈ ಯೋಜನೆಯನ್ನು ಇಸ್ಕಾನ್ ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ ಅನ್ನೋದಂತೂ ನಿಜ.

ಆದ್ರೆ, ಇದಿಷ್ಟೆ ನಿಜವಲ್ಲ. ಡಿ.ಕೆ. ಶಿವಕುಮಾರ್ ಆರೋಪಿಸಿರುವ ಹಾಗೆ, ವಿದೇಶಗಳಲ್ಲಿ ನಮ್ಮ ಬಡ ಮಕ್ಕಳ ಚಿತ್ರವನ್ನು ತೋರಿಸಿ ಇಸ್ಕಾನ್ ಹಣ ಸಂಗ್ರಹಿಸುತ್ತಿರುವುದೂ ಅಷ್ಟೆ ನಿಜ. ಹೀಗೆ ಹಣ ಸಂಗ್ರಹಿಸಲು ನಿಮಗೆ ಅದ್ಯಾರು ಅನುಮತಿ ಕೊಟ್ರೂ ಅಂದ್ರೆ.. ಇಸ್ಕಾನ್ ಮಂದಿ ಹೇಳೋದು: ನಿಯಮದನ್ವಯವೇ ನಾವು ಈ ಹಣ ಸಂಗ್ರಹಿಸುತ್ತಿದ್ದೇವೆ; ಇದ್ರಲ್ಲಿ ಯಾವುದೇ ಮುಚ್ಚುಮರೆಯಿಲ್ಲ ಅಂತ.

ನಿಜ ಸ್ವಾಮಿ ನಿಜ. ನೀವು ವಿದೇಶದಲ್ಲಿ ನಮ್ಮ ಮಕ್ಕಳ ಫೋಟೋ ತೋರಿಸಿ ಹಣ ಸಂಗ್ರಹಿಸುತ್ತಿರುವುದು ನಿಜ. ಆ ಹಣ ಅಕ್ಷಯ ಪಾತ್ರೆಗೆ ಮಾತ್ರ ಸದ್ವಿನಿಯೋಗವಾಗ್ತಾ ಇದ್ಯಾ ಅಥವಾ ಬೇರೆ ಬೇರೆ ಉದ್ದೇಶಗಳಿಗೆ ಸದ್ಬಳಕೆ ಆಗ್ತಿದ್ಯಾ ಅಂದ್ರೆ, ಡಿಕೆಶಿ ಆರೋಪಗಳ ಪಟ್ಟಿಯನ್ನೇ ಮುಂದಿಡ್ತಾರೆ.

ಇಲ್ಲೊಂದು ಮಾತು. ಕರ್ನಾಟಕದಲ್ಲಿ ಅಕ್ಷರ ದಾಸೋಹ ಕಾರ‍್ಯಕ್ರಮವೇ ಇರಲಿಲ್ಲ ಅಂತ ಅನ್ಕೊಳ್ಳಿ. ಆಗ ತಾಯಿ-ತಂದೆ ತಮ್ಮ ಮಕ್ಕಳನ್ನೇನೂ ಉಪವಾಸ ಇರಿಸ್ತಿರಲಿಲ್ಲ ಅನ್ನೋದು ಅಷ್ಟೇ ನಿಜ. ತಮ್ಮ ಹೊಟ್ಟೆಬಟ್ಟೆ ಕಟ್ಟಿಯಾದ್ರೂ ಮಕ್ಕಳನ್ನು ಸಾಕೋ ತಾಕತ್ತು ಕನ್ನಡಮಂದಿಗೆ ಯಾವತ್ತು ಇದ್ದೇ ಇದೆ. ಹಾಗಂತ ನಾವು ಅಕ್ಷರ ದಾಸೋಹ ಕಾರ‍್ಯಕ್ರಮ ವಿರೋಧಿಸ್ತಿದ್ದೇವೆ ಅಂತ ಅಲ್ಲ. ಅಷ್ಟಕ್ಕೂ ಸರ್ಕಾರ ಅಕ್ಷರ ದಾಸೋಹ ಕಾರ‍್ಯಕ್ರಮ ರೂಪಿಸಿದ್ದು ತನ್ನ ಜನಪ್ರಿಯತೆಗೋಸ್ಕರ ಅನ್ನೋದು ಅಷ್ಟೆ ನಿಜ. ಇರಲಿ, ಈ ವಿಷಯ ಬೇರೆ. ಈಗ ನೋಡಿ ಹೀಗೆ ಮಕ್ಕಳ ಹೆಸರಲ್ಲಿ ದೇಣಿಗೆ ಸಂಗ್ರಹಿಸುತ್ತಿರುವ ಇಸ್ಕಾನ್, ಅದನ್ನು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸುತ್ತಿದೆಯಂತೆ..

ಇದೇ ಡಿ.ಕೆ. ಶಿವಕುಮಾರ್, ವಿಧಾನಮಂಡಲದಲ್ಲಿ ನೀಡಿರುವ ಹೇಳಿಕೆ ಇದು. ಆ ಪ್ರಕಾರ, ಇಸ್ಕಾನ್ ಸಂಸ್ಥೆ, ‘ಇಂಡಿಯಾ ಹೆರಿಟೇಜ್ ಟ್ರಸ್ಟ್’ ಹೆಸರಿನಲ್ಲಿ ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಭೂಮಿ ಖರೀದಿಸಿ ೨ ಸಾವಿರ ಫ್ಲ್ಯಾಟ್‌ಗಳನ್ನು ನಿರ್ಮಿಸಿದೆ. ಅಷ್ಟೇ ಅಲ್ಲ, ಅದನ್ನು ಮಾರಾಟ ಕೂಡ ಮಾಡಿದೆಯಂತೆ. ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸುಮಾರು ೧೦೦ ಎಕರೆಯಲ್ಲಿ ಐಷಾರಾಮಿ ವಿಲ್ಲಾಗಳನ್ನು ನಿರ್ಮಿಸಿ ಮಾರಿದೆಯಂತೆ. ಇದಿಷ್ಟೆ ಅಲ್ಲ, ತಿರುಪತಿ, ಚೆನ್ನೈ, ಜೈಪುರ, ಶ್ರೀರಂಗಪಟ್ಟಣ ಮತ್ತಿತರ ಕಡೆ ರೆಸಾರ್ಟ್‌ಗಳನ್ನು ನಿರ್ಮಿಸಿದೆಯಂತೆ. ತಮ್ಮ ಈ ಆರೋಪಗಳು ಸುಳ್ಳೇನಲ್ಲ. ಅದಕ್ಕೆ ಇಲ್ಲಿದೆ ಪ್ರಮಾಣಪತ್ರ ಎನ್ನುತ್ತಾರೆ ಶಿವಕುಮಾರ್.

ಇಷ್ಟೆಲ್ಲಾ ರಾದ್ಧಾಂತವಾದ ಮೇಲೆ ಸರ್ಕಾರ ಕಣ್ಮುಚ್ಚಿಕೊಂಡು ಸುಮ್ಮನೆ ಕೂರುವುದಾದ್ರೂ ಹೇಗೆ ? ಯಾವಾಗ ಶಿವಕುಮಾರ್ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಿದರೋ, ಒತ್ತಡಕ್ಕೆ ಸಿಲುಕಿದ ಸರ್ಕಾರ ಇಸ್ಕಾನ್ ವ್ಯವಹಾರಗಳ ತನಿಖೆಗೆ ಜಂಟಿ ಸದನ ಸಮಿತಿಯನ್ನು ರಚಿಸಿದೆ. ಈ ಸಮಿತಿಯಲ್ಲಿ ಶಿವಕುಮಾರ್ ಕೂಡ ಸದಸ್ಯರು. ಅದಕ್ಕೆ ಇಸ್ಕಾನ್ ಆಕ್ಷೇಪ ಕೂಡ ವ್ಯಕ್ತವಾಗಿದೆ. ಆದ್ರೆ, ಅದಕ್ಕೆ ಶಿವಕುಮಾರ್ ಜಗ್ತಿಲ್ಲ.

ಇಷ್ಟು ಮಾತ್ರ ಅಲ್ಲ, ಇಸ್ಕಾನ್ ದೇವಾಲಯದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಕೂಡ ನಡೆಯುತ್ತಿದೆಯಂತೆ. ದೇವಸ್ಥಾನಕ್ಕೆ ಭೇಟಿ ನೀಡಿ ಮಹಿಳೆಯರನ್ನು ಕೈಹಿಡಿದೆಳೆಯುವುದು ಮತ್ತಿತರ ಅನುಚಿತ ಘಟನೆಗಳು ಜರುಗಿವೆ ಅನ್ನೋದು ಶಿವಕುಮಾರ್ ಕಿಡಿ. ಡಿಕೆಶಿ ಈ ಆರೋಪಗಳನ್ನು ಇಸ್ಕಾನ್ ಮೇಲೆ ಪದೇ ಪದೇ ಮಾಡುತ್ತಲೆ ಬಂದಿದ್ದಾರೆ. ಇದ್ರಿಂದ ಕೆರಳಿದ ಇಸ್ಕಾನ್ ಮಂದಿ ಶಿವಕುಮಾರ್ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನೂ ಹೂಡಿದ್ದಾರೆ.

ಇದ್ಯಾವುದಕ್ಕೂ ಜಗ್ಗದ ಡಿಕೆಶಿ ಮಾತ್ರ ಇಸ್ಕಾನ್ ವಿರುದ್ಧದ ಹೋರಾಟ ಮುಂದುವರಿಸುವುದಾಗಿ ಸಾರಿದ್ದಾರೆ. ಇಲ್ಲೊಂದು ಪ್ರಶ್ನೆ: ರಾಜ್ಯವನ್ನು ಕಾಡುತ್ತಿರುವ ಹಾಗೂ ಹಾದಿ ತಪ್ಪಿರುವ ಸರ್ಕಾರವನ್ನು ಸರಿದಾರಿಗೆ ತರುವ ಗುರುತರ ಜವಾಬ್ದಾರಿ ಶಿವಕುಮಾರ್ ಮೇಲಿದೆ. ಅಂತಹದ್ರಲ್ಲಿ ಇಸ್ಕಾನ್ ವಿಷಯಕ್ಕೆ ಅದ್ಯಾಕೆ ಇಷ್ಟೊಂದು ತಲೆ ಕೆಡಿಸಿಕೊಂಡಿದ್ದಾರೆ ಅನ್ನೋ ಸಣ್ಣ ಅನುಮಾನ ಮೂಡದೇ ಇರಲಾರದು. ಹಾಗೆಯೇ ಇಸ್ಕಾನ್ ವ್ಯವಹಾರಗಳು ಕೂಡ ಅನುಮಾನಕ್ಕೆ ಆಸ್ಪದ ತರುವಂತಹವೇ ಆಗಿವೆ. ಅಷ್ಟಕ್ಕೂ ನಮಗೆ ಸಾಕಲು ಯೋಗ್ಯತೆ ಇಲ್ಲ. ವಿದೇಶದಲ್ಲಿ ನೀವು ಭಿಕ್ಷೆ ಬೇಡಿ ನಮ್ಮ ಮಕ್ಕಳಿಗೆ ಅನ್ನ ಹಾಕಿ ಅಂತ ಯಾವ ತಂದೆ ತಾಯಿ ಕೂಡ ಇಸ್ಕಾನ್‌ಗೆ ಅರ್ಜಿ ಹಾಕಿಕೊಂಡಿಲ್ಲ. ಇದಿಷ್ಟೆ ಅಲ್ಲ, ಇಸ್ಕಾನ್ ಸೇವೆ ಭಕ್ತರಿಗೋಸ್ಕರ ಅನ್ನೋದಾದ್ರೆ.. ಇಸ್ಕಾನ್ ಕಣ್ಣಿಗೆ ಹೈಫೈ ಭಕ್ತರು ಮಾತ್ರ ಕಾಣಿಸುತ್ತಾರೆಯೇ ? ಇವತ್ತಿಗೂ ನಮ್ಮ ಹಳ್ಳಿಗಳಲ್ಲಿ ದೈನೇಸಿ ಬದುಕು ದೂಡುತ್ತಿರುವ ಸಮಾಜದ ಕಟ್ಟಕಡೆಯ ಜನ ಇವರ ಕಣ್ಣಿಗೆ ಬೀಳುವುದಿಲ್ಲವೇ ಅನ್ನೊ ಪ್ರಶ್ನೆ ಇಲ್ಲಿ ಉದ್ಭವಿಸುವುದು ಸಹಜ.

ಹೈಫೈ ದೇಗುಲಗಳನ್ನು ಕಟ್ತಾರೆ. ಜನರಿಂದ ಹಣ ಸಂಗ್ರಹಿಸ್ತಾರೆ. ಭಕ್ತರ ಸೇವೆಗೆಂದು ರೆಸಾರ್ಟ್‌ಗಳನ್ನು ನಿರ್ಮಿಸ್ತಾರೆ. ಆದ್ರೆ, ಇಷ್ಟೆಲ್ಲಾ ಮಾಡೋ ಈ ಮಂದಿ ಹಳ್ಳಿಗಳನ್ನು, ಬಡವರನ್ನು ಮರೀತಾರೆ! ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನೇ ಇದನ್ನು ಮೆಚ್ಚುವುದಿಲ್ಲ ಅನ್ಸುತ್ತೆ. ಇದೇ ವೇಳೆ, ನಮ್ಮನ್ನಾಳುವ ರಾಜಕಾರಣಿಗಳ ವರ್ತನೆ ಕೂಡ ಬದಲಾಗಲೇಬೇಕಿದೆ. ಸ್ವಂತ ಹಿತಾಸಕ್ತಿಗಿಂತ ಜನ ಹಿತಾಸಕ್ತಿಯೇ ಮೇಲು ಅನ್ನೋ ಧೋರಣೆಯನ್ನು ನಮ್ಮ ನಾಯಕಮಣಿಗಳು ತಾಳಬೇಕಿದೆ. ದೇವ್ರು ಅವ್ರಿಗೆ ಆ ಬುದ್ಧಿ ಕೊಡ್ಲಿ.

- ಅಲೀಂ

ಅಲೀಂ ನೇರಮಾತು

ಇದು ನನ್ನ ಹೊಸ ಬ್ಲಾಗ್‌.

ನನಗನ್ನಿಸಿದ ಅಭಿಪ್ರಾಯಗಳನ್ನು ಹೇಳುತ್ತಾ ಹೋಗುತ್ತೇನೆ. ಓದಿ, ಸಲಹೆ ನೀಡಿ, ಪ್ರತಿಕ್ರಿಯಿಸಿ. ನಿಮ್ಮ ಅಭಿಪ್ರಾಯಗಳನ್ನು ನಾನು ಒಪ್ಪದೇ ಇರಬಹುದು. ಆದರೆ, ನಿಮ್ಮ ಅಭಿಪ್ರಾಯ ಹೇಳುವ ಸ್ವಾತಂತ್ರ‍್ಯವನ್ನು ಎತ್ತಿ ಹಿಡಿಯುತ್ತೇನೆ.

- ಅಲೀಂ